ಭಾವನೆಗಳ ಮಾಯಲೋಕದ ಆಚೆಗೆ
ಖಾಲಿ ಹೃದಯ, ಆಕಾಶ ನೀಲಿ ರಂಗು, ಮನದಾಳದಲ್ಲಿ ಸದ್ದಾಗದಂತೆ ಭೋರ್ಗರೆಯುವ ಹಗುರವಾದ ಭಾವದಲೆಗಳು… ಬದುಕು ಒಂದು ಶಾಂತ ಸಾಗರ. ಮೌನರಾಗದ ಜೊತೆ, ಪ್ರಶಾಂತವಾದ ಮಾತುಕತೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಆ ಸಮಯದ ಚಂದವೇ ಬೇರೆ ಲೆವೆಲ್. ಇಂತಹ ಬದುಕನ್ನು ನೋಡುವ ಕೆಲವರು ಇಂಗ್ಲಿಷ್‌ನಲ್ಲಿ “Boring Personality” ಎಂದು ಕರೆಯಬಹುದು. ಆದರೆ ನಿಜವಾಗಿಯೂ ಮೌನವಾಗಿರುವ ಮನಸ್ಸು ಬೋರ್ ಆಗಿರುತ್ತದೆಯೇ? ಒಂಟಿಯಾಗಿ ಇರುವ ವ್ಯಕ್ತಿ ಖಾಲಿಯಾಗಿರುತ್ತಾನೆಯೇ? ಬಹುಶಃ ಇಲ್ಲ. ವಾಸ್ತವವಾಗಿ ನೋಡಿದರೆ, ಮೌನ ಮತ್ತು ಒಂಟಿತನ ಎರಡೂ ಭಯಾನಕ. ಮನುಷ್ಯ ಭಾವನಾಜೀವಿ. ತನ್ನ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂಬ ಆಸೆ ಅವನಿಗಿದೆ. ಸಂಘ-ಒಡನಾಟ ಅವನಿಗೆ ಉಸಿರಾಟದಷ್ಟೇ ಅವಶ್ಯಕ. ಸಂತೋಷವನ್ನು ಹಂಚಿಕೊಳ್ಳಲು ಯಾರಾದರೂ ಬೇಕು; ನೋವನ್ನು ಕೇಳಲು ಮತ್ತೊಬ್ಬರು ಬೇಕು. ಆದರೆ ವಾಸ್ತವ ಮತ್ತು ಕಲ್ಪನೆ—ಇವೆರಡನ್ನೂ ಮೀರಿಸುವ ಒಂದು ಸತ್ಯವಿದೆ. ಅದು ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ. ಇವೆರಡನ್ನು ಸಂಪೂರ್ಣವಾಗಿ ಬಲ್ಲವರು ಯಾರಾದರೂ ಇದ್ದಾರೆಯೇ? ಖಂಡಿತ ಇಲ್ಲ. ಹಾಗಾದರೆ ಈ ಒಂಟಿತನ, ಈ ಮೌನ, ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ—ಇವೆಲ್ಲಕ್ಕೂ ಏನಾದರೂ ಸಂಬಂಧವಿದೆಯೇ? ಬಹುಶಃ ಇದೆ. ಅದೇನು ಎಂಬುದನ್ನು ಅರಿಯುವ ಪ್ರಯತ್ನವೇ ಬದುಕಿನ ಮತ್ತೊಂದು ಪಯಣ. ನಾವು ಹುಟ್ಟಿನಿಂದಲೇ ಒಂದು ನಂಟನ್ನು ಹೊತ್ತುಕೊಂಡು ಬರುತ್ತೇವೆ. ತಾಯಿಯ...