ಒಲವ ಹಲವು ಮುಖಗಳು_1

 




ಒಲವ ಹಲವು ಮುಖಗಳು

ಈ ಜಗತ್ತು ನಮಗೆ ಹಲವಾರು ವಿಭಿನ್ನವಾದ ಒಲವ ದಂತಕಥೆಗಳನ್ನು ಹೇಳುತ್ತದೆ.ಅದು ಕಾಲ್ಪನಿಕವೂ ಇರಬಹುದು, ವಾಸ್ತವದಲಿ ನಡೆದಿರುವ ಘಟನೆಗಳೂ ಆಗಿರಬಹುದು.ಬದುಕಿನಲ್ಲಿ ಪ್ರೀತಿ ಸಿಂಗಾರಗೊಂಡು ಮೆರೆಯತೊಡಗಿದರೆ ಆ ಚಂದನೇ ಬೇರೆ. ಪ್ರೀತಿಯೇ ಬದುಕಲ್ಲ ನಿಜ. ಆದರೆ ಬದುಕಿನಲ್ಲಿ ಪ್ರೀತಿ ಇದ್ದರೆ ಬದುಕಿನ ಬಣ್ಣಗಳೇ ಬದಲಾಗಿ ಬದುಕು ರಮ್ಯ ಚೖತ್ರಕಾಲವಾಗಿರುತ್ತದೆ.ಆದರೆ ಈ ಪ್ರೀತಿ ಇಲ್ಲಿ ಶುದ್ದವಾಗಿರಬೇಕು. ಇಲ್ಲವಾದರೆ ಬದುಕು ಬಣ್ಣ ಕಳೆದುಕೊಂಡು ಸಪ್ಪೆಯಾಗಬಹುದು.


ಈ "ಪ್ರೀತಿ ಪ್ರೇಮ" ಎಲ್ಲ ಕಥೆಗಳಲ್ಲಿ ಓದೋಕೆ ಚೆನ್ನಾಗಿರುತ್ತದೆ. ವಾಸ್ತವದ ಬದುಕಿನಲ್ಲಿ ಬರಿಯ ನರಕದರ್ಶನವೇ ಎನುವುದು ಕೆಲವರ ವಾದ. ಇದೇ ಪ್ರೀತಿಯನ್ನು ಕೆಲವರು ಸ್ವರ್ಗಕ್ಕೂ ಹೋಲಿಸುತ್ತಾರೆ. ಇಲ್ಲಿ ಯಾವುದು ಸರಿ, ಯಾವುದು ತಪ್ಪು? ಇದು ಅವರವರ ಭಾವಕ್ಕೆ ಸರಿಯಾಗಿ ಬದಲಾಗೋ ವಿಷಯನಾ? ಅಥವಾ ಅವರವರ ಬದುಕಿನ ಅನುಭವಕ್ಕೆ ಸೀಮಿತವಾದ ವಿಷಯನಾ? ಇಲ್ಲಿ ಎರಡೂ ನಿಜ. ಪ್ರೀತಿ ಭಾವ ಹಾಗೂ ಬದುಕಿಗೆ ಅಂಟಿದ ನಂಟು.ಅದನ್ನು ಕೇವಲ ಒಂದು ಭಾವವೆಂದುಕೊಂಡರೆ ಅದು ಭಾವವಷ್ಟೆ. ಬದುಕೆಂದುಕೊಂಡರೆ ಅದು ಬದುಕು.

ಪ್ರೀತಿ ಆಕರ್ಷಣೆಯಲ್ಲ, ಮೋಹವಲ್ಲ, ಅನುರಾಗವಲ್ಲ, ಅನುಕಂಪವೂ ಅಲ್ಲ. ಪ್ರೀತಿ ಕೇವಲ ಪ್ರೀತಿಯಷ್ಟೆ. ಅದು ಎಂದಿಗೂ ಪರಿಶುದ್ದ. ಪ್ರೀತಿ ಖಂಡಿತ ಒಂದು ಸಂಬಂಧವಲ್ಲ.ನಿಜವಾದ ಪ್ರೀತಿ ಎನ್ನುವುದು ಜೀವ ಜೀವನವನ್ನೆ ಬೆಸೆಯುವ ಒಂದು ನವಿರಾದ ಬಂಧನ.ಅದು ಬಿಗಿಯಾದರೆ ಕುಣಿಕೆಯೂ ಆಗಬಹುದು. ಸಡಿಲವಾದರೆ ಗಾಳಿಗೆ ಹಾರಿ ಹೋಗಬಹುದು. ಆ ಬಂಧನದ ಹಿಡಿತದ ಮೇಲೆ ಪ್ರೀತಿಯ ಆಯಸ್ಸು ಆಳ ಎಲ್ಲವೂ ನಿಗದಿತವಾಗಿರುತ್ತದೆ.



ಪ್ರೀತಿ ಯಲ್ಲಿ ಸರಿ ತಪ್ಪುಗಳಿದೆಯಾ? ಪ್ರೀತಿಯಲ್ಲಿ ಸೋಲು ಗೆಲುವುಗಳಿದೆಯಾ? ಪ್ರೀತಿ ಒಂಟಿನಾ? ಜಂಟಿನಾ? ಖಂಡಿತ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಿಲ್ಲ.ಯಾಕೆಂದರೆ ಪ್ರೀತಿಯೆನ್ನುವುದು ಎರಡೂ ಮನಗಳ ತೀರ ಖಾಸಾಗಿ ವಿಷಯ. ಬದುಕಿನ ಪರಿಸ್ಥಿತಿಗಳನ್ನು ನಿಭಾಯಿಸಲಾಗದೆ ಸೋತಾಗ ಆ ಸೋಲಿನ ಭಾರವನ್ನು ಪ್ರೀತಿ ಮೇಲೆ ಎತ್ತಿ ಹಾಕಿ ಪ್ರೀತಿ ಸೋತಿತು ಅಂದರೆ ಒಪ್ಪಲು ಸಾಧ್ಯವಿಲ್ಲ. ಪ್ರೀತಿ ಪರರ ತೀರ್ಪಿಗೆ ನಿಲುಕದ ಜಂಟಿ ಜೀವಗಳ ಖಾಸಾಗಿ ವಿಷಯ.ಮನುಷ್ಯ ಬದುಕಿನ ಪರಿಸ್ಥಿತಿಗಳಲ್ಲಿ ಸೋತಾಗ ಅಲ್ಲಿ, ಪ್ರೀತಿ, ಸ್ನೇಹ, ಬಯಕೆ, ಕನಸು, ಬಂಧ ಸಂಬಂಧಗಳಿಗೆ ಘಾಸಿಯಾಗೋದು ಸಾಮಾನ್ಯ ವಿಷಯ. ಇಲ್ಲಿ ಸೋತಿರುವುದು ಮನುಷ್ಯ ಹೊರತು ಬೇರ್ಯಾವುದು ಅಲ್ಲ.

ಪ್ರೀತಿಯನ್ನು ವಿವರಣೆಗೆ ನಿಲುಕದ ಒಂದು ಅನುಭವ ಅಂತನೂ ಕರೆಯಬಹುದು. ಈ ಅನುಭವ ಮತ್ತು ಭಾವ ಇವೆರಡೂ ಒಂದಕ್ಕೊಂದು ಪೂರಕ ಎಂದರೆ ನಂಬುವಿರಾ?

ಹೌದು.. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರೀತಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದರೆ ಅದು ಪ್ರೀತಿಯ ಮೇಲೆ ಅವನ ಆಲೋಚನೆ ಮತ್ತು ದೃಷ್ಟಿಕೋನಕ್ಕೆ ಸರಿಯಾಗಿರುತ್ತದೆ. ಕೆಲವರಿಗೆ ಪ್ರೀತಿ ಉಸಿರಾದರೆ ಇನ್ನೂ ಕೆಲವರಿಗೆ ಕೇವಲ ಅದೊಂದು ಭಾವನೆ. ಕೆಲವರಿಗೆ ಪ್ರೀತಿ ದೖವಿಕವಾದರೆ ಇನ್ನೂ ಕೆಲವರಿಗೆ ಕಾಲಹರಣದ ಆಟಿಕೆ.

 ಹೀಗೆ ಪ್ರೀತಿಗೆ ಪ್ರತಿಯೊಬ್ಬನ ಪ್ರಕಾರ ಒಂದೊಂದು ದೃಷ್ಟಕೋನವಿರುತ್ತದೆ. ಯಾವಾಗ ವೖರುಧ್ಯ ದೃಷ್ಟಿಕೋನಗಳ ವ್ಯಕ್ತಿಗಳ ನಡುವೆ ಪ್ರೀತಿಯಾಗುತ್ತದೆಯೋ ಅದು ನರಕದಲ್ಲಿ ಕೊನೆಗೊಳ್ಳುತ್ತದೆ. ಇನ್ನು ಸಮಾನ ದೃಷ್ಟಿಯ ಮನಗಳ ನಡುವೆ ಮೂಡುವ ಪ್ರೀತಿ ಸಂತೋಷದದಾಯಕ ಬದುಕನ್ನು ಕಟ್ಟಿಕೊಡುತ್ತದೆಯೋ? ಖಂಡಿತ ಇಲ್ಲ. ಇಲ್ಲಿ ಕೇವಲ ಪ್ರೀತಿಯ ದೃಷ್ಟಿಕೋನವಷ್ಟೆ ಸಮಾನವಾಗಿರುತ್ತದೆ.ಬದುಕು ಅಂದ ಮೇಲೆ ಸಾವಿರಾರು ವಿಚಾರಗಳಿರುತ್ತದೆ.ಇನ್ನುಳಿದವುಗಳೆಲ್ಲವನ್ನೂ ಇಬ್ಬರೂ ಸರಿಯಾಗಿ ಸಮದೂಗಿಸಲು ಸಾಧ್ಯವೇ ಎನ್ನುವುದು ದೊಡ್ಡ ಪ್ರಶ್ನೆ. ಸಾಧ್ಯವಾದಲ್ಲಿ ಖಂಡಿತ ಇವರ ಪ್ರೀತಿ ಗೆಲ್ಲಬಹುದು. ಇಲ್ಲವಾದಲ್ಲಿ ಈ ಪ್ರೀತಿ ಮತ್ತೆ ನರಕ.

ಹಾಗದರೆ ಪ್ರೀತಿ ಯಾವಾಗ ಗೆಲ್ಲುತ್ತದೆ.? ಆ ಎರಡೂ ವ್ಯಕ್ತಿಗಳ ಬದುಕಿನ ಪ್ರತಿ ನರಕದರ್ಶನವನ್ನು ಒಬ್ಬರಿಗಾಗಿ ಇನ್ನೊಬ್ಬರೂ ಸೖರಿಸುವ ಮನಸು ಮಾಡಿದಾಗ.ಇಬ್ಬರೂ ಬದುಕಿನ ಜವಬ್ದಾರಿಗಳಿಗೆ ಹೆಗಲಾದಾಗ. ಅವರಿವರ ಮಾತುಗಳಿಗೆ ತಲೆ ಕೊಡುವುದನ್ನು ಬಿಟ್ಟು ಇಬ್ಬರೂ ಪರಸ್ಪರ ಗೌರವದಿಂದ ನಡೆದುಕೊಂಡಾಗ.ಕಷ್ಟ ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ.ಅದ್ಯಾವ ಪರಿಸ್ಥಿತಿಯೇ ಇರಲಿ ಕೊನೆಯವರೆಗೂ ಒಬ್ಬರನ್ನೊಬ್ಬರೂ  ಬಿಟ್ಟುಕೊಡದೆ ಬದುಕಿದಾಗ..

ನಿಜ ಹೇಳಬೇಕಂದರೆ ಇವೆಲ್ಲವೂ ಮಾತುಗಳಲ್ಲಿ ಚಂದ. ಬದುಕಿನ ಎದುರು ಇಂತಹ ಸಂಗತಿಗಳು ಬಂದು ನಿಂತಾಗ ಅದನ್ನು ನಿಭಾಯಿಸುವುದು ಸುಲಭವಲ್ಲ.ಇಲ್ಲಿ ಗೆದ್ದವರಿಗಿಂತ ಸೋತವರೆ ಹೆಚ್ಚು.ಯಾಕೆಂದರೆ ಈ ಜಗದಲ್ಲಿ ಎಲ್ಲರಿಗೂ ಪ್ರೀತಿ ಚಂದವಾದ ಆಸಕ್ತಿದಾಯಕ ವಿಷಯ. ಆದರೆ ಬದುಕು? ಬಲು ಕಠಿಣವಾದ ಹೊರೆ. ಪ್ರೀತಿಯನ್ನು ಒಬ್ಬಂಟಿಯಾಗಿ ನೋಡಿದಾಗ ಚಂದವಾಗೇ ಕಾಣುತ್ತದೆ. ಪ್ರೀತಿ ಬದುಕಿಗಂಟಿದಾಗಲೇ ಅದರಾಳವೇನೆಂದು ಅರ್ಥವಾಗುವುದು. ಅದೇನೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ..

(ಸಶೇಷ)

PN Rai








Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..