ಮಾತು ಮರೆತವರು..
ಬದುಕ ನಿಶೆಯೊಳಗಿನಿಂದ..
ಅಧ್ಯಾಯ _2
ಮಾತು ಮರೆತವರು..
ಈಗ ನಾವೆಲ್ಲ ಒಮ್ಮೆ ಕಾಲಚಕ್ರವನ್ನು ಸುಮಾರು ಒಂದು ಹದಿನೈದು ವರ್ಷ ಹಿಂದೆ ಸರಿಸಿ ನೋಡೋಣ್ವ ?. ವಾವ್..ಎಷ್ಟು ಚೆನ್ನಾಗಿತ್ತು ಅಲ್ವ?ಆ ಕಾಲ ನೆನಪಿಗೆ ಬಂದರೆ ಒಂಥರಾ ರೋಮಾಂಚನ.
ಆ ಜನಜೀವನ,ಪ್ರಕೃತಿ,ಸಂಸ್ಕೃತಿ,ಸಂಬಂಧ,ಎಲ್ಲವೂ ಆಕಾಶದೆತ್ತರ ಮೆರೆಯುತಿದ್ದ ಒಂದು ಕಾಲ ಅದು..
ಅಲ್ಲಿ ಮನುಷ್ಯನ ಜೀವನಘಟ್ಟಗಳಾದ ಬಾಲ್ಯ ಯೌವ್ವನ ಮುಪ್ಪು ಇವೆಲ್ಲ ಅರಳುವ ಪರಿಯೇ ಬಹಳ ಚಂದವಾಗಿತ್ತು.ಆ ಬದುಕಿಗೆ ಒಂದು ಸುಗಂಧವಿತ್ತು.ಮೊಗ್ಗರಳಿ ಹೂವಾಗಿ ಕಾಯಿ ಹಣ್ಣಾಗಿ ಮತ್ತೆ ಬೀಜ ಮೊಳೆತು ಸಸಿಯಾಗಿ ಜೀವನಚಕ್ರದಲ್ಲಿ ತಿರುತಿರುಗಿ ಚರಿತ್ರೆಯಾಗಿರುವ ಆ ಕಥೆಗಳಿವೆಯಲ್ವ ಅದೇ ನಿಜವಾದ ಬದುಕು.ಆದರೆ ಇಂದು ..?ದಿನಗಳೆಯುತಿದೆ ...ನಿಜ.. ವಯಸ್ಸು ಆಗುತ್ತಿದೆ..ಆದರೆ ಬದುಕು ...ಯಾಂತ್ರಿಕವಾಗಿದೆ.ಇಲ್ಲಿ ಕೃತಕತೆ ಹೊರತು ಬೇರೆ ಏನೂ ಇಲ್ಲ.
ಈ ಮೊಬೈಲ್,ಲ್ಯಾಪ್ಟಾಪ್ ,ಇಂಟರ್ನೆಟ್,ಸೋಷಿಯಲ್ ಮೀಡಿಯಾ ಎನುವ ಮಾಯೆಗಳೆಲ್ಲ ನಮಗೆ ಪರಿಚಯವಾಗುವ ಮುನ್ನ ಈ ಜಗವು ಹೇಗಿತ್ತು?
ಇಂದು ನಾವು ಅದನ್ನು ನೆನಪಿಸಿಕೊಳ್ಳುವುದಕ್ಕೂ ಸಮಯವಿಲ್ಲದಷ್ಟು ಮೊಬೈಲ್ನ ಮಾಯೆಯೊಳಗೆ ಬಂಧಿಯಾಗಿದ್ದೇವೆ ಎಂದರೆ ನಂಬಲು ಸಾಧ್ಯವಿಲ್ಲ.ಅದರ ಜೊತೆಗೆ ಜಗದ ಎಲ್ಲ ಭೌತಿಕವಾದ ನಂಟು ಕಳಚಿಕೊಂಡು ನೀರವ ಮೌನದೊಡನೆ ಬೆರೆತು ಹೋಗಿದ್ದೇವೆ
"ಮಾತು ಬೆಳ್ಳಿ,ಮೌನ ಬಂಗಾರವೆಂಬ ಹಿರಿಯರ ಮಾತಿದೆ.ಬಂಗಾರವೆಂದುಕೊಂಡ ಮೌನಕ್ಕೆ ಬೆಲೆ ಕೊಟ್ಟು ಜಗವೇ ಮೌನವಾದರೆ ಹೇಗೆ??? ಆ ಮೌನವು ಮೌಲ್ಯ ಕಳೆದುಕೊಳ್ಳುವುದಲ್ಲವೆ? ಹಿರಿಯರು ಮೌನ ಬಂಗಾರವೆಂದಿದ್ದು ಮಾತಿನ ನಡುವೆ ಇರುವ ಗಳಿಗೆಗಳ ಮೌನದ ಬಗ್ಗೆ. ಪಟ ಪಟ ಮಾತಿನ ಮಳೆ ಸುರಿಸಿ ನಿಂತಾಗ ಆವರಿಸುವ ಆ ಮೌನ ಬಂಗಾರ.ಆದರೆ ಇಂದು ಯಂತ್ರ ಗಳೊಂದಿಗೆ ಬೆರೆತು
ನಮ್ಮನ್ನು ನಾವು ಮರೆತು,ನಮ್ಮ ಅಸ್ತಿತ್ವವನ್ನು ಅಳಿಸುವಂತೆ ಜಗವ ಆವರಿಸಿರುವ ಈ ಸ್ಮಶಾನ ಮೌನವನ್ನು ಯಾರು ಕೂಡ ಇಷ್ಟಪಡಲ್ಲ.ಯಾಕೆಂದರೆ ಈ ಮೌನದ ರೂವಾರಿ ಹಣ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಬದಲಾದ ಜಗ.
ಹಾಗೆಯೇ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಅಂತನೂ ಹೇಳಿದ್ದಾರೆ.ಮನಷ್ಯನಿಗೆ ಮಾತು.. ಹಾಗೂ ಆ ಮಾತಿಗೊಂದು ಅಂದದ ಭಾಷೆ, ಇವು ನಿಸರ್ಗ ನೀಡಿದ ವರ.ಆದರೆ ಇಂದಿನ ಜಗತ್ತು ಮಾತಾಡುವುದನ್ನು ಮರೆತಿದೆ. ಹೌದು ಯಂತ್ರಗಳ ಮಧ್ಯೆ ಸೇರಿ ತಾನು ಅದರಂತೆ ವರ್ತಿಸಲು ಶುರು ಮಾಡಿದ್ದಾನೆ ಮನುಷ್ಯ.
ಮೊಬೈಲ್ನ ಒಳಗೆ ಮುಳುಗಿದರೆ ನಮಗೆ ಜಗವೇ ಕಾಣೆಯಾದಂತೆ ಭಾಸವಾಗಿ ಮತ್ಯಾವುದು ಬೇಡವಾಗುತ್ತದೆ.ಅಡುಗೆಮನೆಯಿಂದ ಅಮ್ಮನ ಕರೆ,ಬಾಗಿಲಿನ ಕರೆಗಂಟೆ ಸದ್ದು,ಅಡುಗೆ ಮನೆಯ ಕುಕ್ಕರ್ ಸೀಟಿ,ಕಛೇರಿಯಿಂದ ಬಂದ ಅಪ್ಪನ ಆಯಾಸದ ಧ್ವನಿ, ಇವೆಲ್ಲವನ್ನು ಕೇಳಿಸಿಯೂ ಕೇಳದಂತಹ ಕಿವುಡುತನ ಆವರಿಸಲಾರಂಭಿಸುತ್ತದೆ.ಇಷ್ಟೊಂದು ಆವರಿಸಿಕೊಳ್ಳು(ಲ್ಲು)ವಂತಹ ಆಕರ್ಷಣೆ ಈ ಮೊಬೈಲ್ಗಿದೆಯೇ.ಇಂದಿನ ಜನಾಂಗವನ್ನು ಕಿರುಬೆರಳಲ್ಲಿ ಕುಣಿಸುತಿರುವ ಮೊಬೈಲ್ ಮನುಷ್ಯನ ಸಂಬಂಧಗಳ ಬಂಧವನ್ನು ಕಡಿದು ಮಾತು ಮರೆಸಿದೆ ಎಂದರೆ ನಂಬುವಂತಹ ವಿಷಯವಲ್ಲ.
ಆದರೆ ಇದರ ಜೊತೆಗೆ ಭಾವನೆಗಳಿರುವ ಮನುಷ್ಯನೂ ಮೌನಿಯಾಗುತಿದ್ದಾನೆ .ಮುರಿದ ಸಂಬಂಧ, ಹರಿದ ಹೃದಯ,ಹದಗೆಟ್ಟ ಪರಿಸ್ಥಿತಿಗಳು,ಜೊತೆಗೆ ಸುತ್ತ ಎಲ್ಲವನ್ನು ದುಡ್ಡಿನಿಂದ ಅಳೆಯುವ ಮನಸ್ಥಿತಿಗಳು.ಸತ್ಯಕ್ಕೆ ದೂರವಾಗಿ ಸತ್ವವನ್ನು ಕಳೆದುಕೊಂಡು ಗಾಳಿ ಮಾತಾಗಿರುವ ತಲೆ ಬುಡ ಇಲ್ಲದ ವಿಚಾರಗಳು, ಜೊತೆಗೆ ನೆಮ್ಮದಿ ಶಾಂತಿ ಇವೆಲ್ಲ ಪರಿಚಯನೆ ಇಲ್ಲದಂತೆ ನಮ್ಮಿಂದ ದೂರ ಹೋಗಿದೆ.ಜಗತ್ತು ಬರಿ ದುಡ್ಡು ಮತ್ತು ತಂತ್ರಜ್ಞಾನದ ಹಿಂದೆ ಓಡುವಾಗ ಭಾವನೆ,ಸಂಸ್ಕಾರ, ಸಭ್ಯತೆಯ ಹಿಂದೆ ಓಡುವವರಿಗೇ ಕೊನೆಗೆ ಉಳಿದಿದ್ದು ಇಲ್ಲಿ ಸೋಲು,ದುಃಖ ಕಣ್ಣೀರು ಮಾತ್ರ. ಇವುಗಳ ಮುಂದೆ ಸೋತವನೂ ಕೂಡ ಇಂದು ಮೌನಿಯಾಗಿದ್ದಾನೆ.
ಹಿಂದೆ ಹೀಗಿರಲಿಲ್ಲ,ಅಮ್ಮನಿಗೆ ಕೆಲಸದ ನಡುವೆ ಬೇಸರವೆನಿಸಿದಾಗ ಪಕ್ಕದ ಮನೆಯವರ ಜೊತೆ ಮಾತಿಗಿಳಿಯುತಿದ್ದರು.ಅಪ್ಪ ಗೆಳೆಯರನ್ನು ಹುಡುಕಿಕೊಂಡು ಅವರ ಮನೆಗೆ ಹೋಗುತಿದ್ದರು.ಅಕ್ಕ ಪಕ್ಕ ಮನೆಯ ಮಕ್ಕಳೆಲ್ಲ ಒಟ್ಟು ಸೇರಿ ಮರಕೋತಿ ಲಗೋರಿ ಚಿನ್ನಿದಾಂಡು ತೆಂಗಿನಮರದ ಕೊತ್ತಲಿಂಗೆಯ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತಿದ್ದೆವು.ತಿಳಿಯದ ಪ್ರಶ್ನೆಯೊಂದಕ್ಕೆ ಉತ್ತರ ಹುಡುಕಲು ಊರಿನ ಅಕ್ಷರಸ್ಥರ ಮನೆ ಬಾಗಿಲು ತಟ್ಟುತಿದ್ದೆವು .ಕಥೆ ಕಾದಂಬರಿ,ವಾರಪತ್ರಿಕೆ ದಿನಪತ್ರಿಕೆ,ಮತ್ತು ವಾರಕ್ಕೊಮ್ಮೆ ಚಂದನದಲ್ಲಿ ಒಂದು ಚಲನಚಿತ್ರ ವೀಕ್ಷಣೆ,ಇವೆ ಆಗ ದೊಡ್ಡ ಮನರಂಜನೆಗಳು.ಶಾಲೆ ಮುಗಿದ ಮೇಲೆ ಸ್ವಲ್ಪ ಮನೆಗೆಲಸ ನಂತರ ಗೆಳೆಯರೊಂದಿಗೆ ಆಟ ಊಟ,ಆಮೇಲೆ ಒಡಹುಟ್ಟಿದವರೊಡನೆ ಸ್ವಲ್ಪ ಜಗಳ,ಇವು ದಿನಚರಿಯಾಗಿತ್ತು.ಆದರೆ ಇಂದು ಇವೆಲ್ಲ ಮರೆಯಾಗಿ ಕೇವಲ ಮೊಬೈಲ್ ಒಂದೇ ಮನರಂಜನೆಯ ಸಾಧನವಾಗಿದೆ. ಮನೆ ಮಕ್ಕಳಿಗೆ ತಮ್ಮ ಮನೆಯವರೊಂದಿಗೆ ಮಾತಾಡಲು ಬೇಸರ.
ಮೊದಲೆಲ್ಲ ಅಮ್ಮ ಮಕ್ಕಳಿಗೆ ಊಟ ಮಾಡಲು ಚಂದ್ರನ ತೋರಿಸುತಿದ್ದಳು.ಮಕ್ಕಳು ತಾಯ ಮಾತನ್ನು ನಂಬಿ ದಿನಗಳೆದಂತೆ ಚಂದಿರನಿಗೆ ಗೆಳೆಯರಾಗುತಿದ್ದರು.ಆ ಗೆಳೆತನ ಬರಬರುತ್ತ ಆ ಮಗು ಬೆಳೆಯುತ್ತ ಹೋದಂತೆ ತಾನು ಯಾರಿಗೂ ಹೇಳಲಾಗದ ಮನದ ನೋವುಗಳನ್ನೆಲ್ಲ ರಾತ್ರಿ ಒಂಟಿಯಾಗಿ ಕೂತು ಅದೆ ಚಂದಿರನ ಜೊತೆ ಹಂಚಿಕೊಳ್ಳುವಷ್ಟು ಬಲವಾಗಿರುತಿತ್ತು.ಆದರೆ ಈಗಿನ ಮಕ್ಕಳು ಚಂದಿರನ ಪರಿಚಿಯಿಸಿಕೊಳ್ಳಲು ಸಮಯವಿಲ್ಲದಷ್ಟು ಮೊಬೈಲ್ನಲ್ಲಿ ಮುಳುಗಿದ್ದಾರೆ.ಇನ್ನೂ ಸ್ನೇಹದ ಮಾತೆಲ್ಲಿದೆ.???
ಆಗೆಲ್ಲ.. ಬೇಸಿಗೆಯ ರಜೆ ಬಂದರೆ ಸಾಕು ನೆಂಟರ ಮನೆಗೆ ಓಡಾಟ,ಅಜ್ಜಿ ಮನೆಯಲ್ಲಿ ಮಕ್ಕಳೆಲ್ಲ ಸೇರಿ ಮನೆಯ ಹಂಚು ಹಾರುವಷ್ಟು ಗಲಾಟೆ ಮಾಡಿದಾಗ ಅಜ್ಜ ಅಜ್ಜಿ ಮಕ್ಕಳನೆಲ್ಲ ಕೂರಿಸಿ ಕಥೆ ಹೇಳುತಿದ್ದರು.ಪುರಾಣದ ಕಥೆಗಳನ್ನು ಆಗ ಓದಿ ತಿಳಿಯುವುದಕ್ಕಿಂತ ಹೆಚ್ಚಾಗಿ ಹಿರಿಯರ ಬಾಯಿಂದ ಕೇಳಿ ತಿಳಿಯುತಿದ್ದುದೆ ಹೆಚ್ಚು.
"ಒಂದು ಊರಿನಲ್ಲಿ ಒಬ್ಬ ರಾಜಕುಮಾರ ಇದ್ದನಂತೆ" ಎಂದು ಕಥೆ ಶುರು ಮಾಡೋ ಅಜ್ಜಿ ಮೊಮ್ಮಗಳಿಗೆ ಬರಿ ಕಥೆ ಹೇಳಿನೆ ಅವಳ ಮನಸಿನಲ್ಲಿ ಒಬ್ಬ ರಾಜಕುಮಾರನ ಸೃಷ್ಟಿ ಮಾಡಿ ಅವಳು ಬೆಳೆದು ದೊಡ್ಡವಳಾಗಿ ಅವನು ಬರುವವರೆಗೆ ಕಾದು.. ಜೀವಮಾನವೆಲ್ಲ ಅವನ ಜೊತೆ ಬಾಳುವಂತ ಒಂದು ಹೆಣ್ಣಾನಾಗಿ ಪರಿವರ್ತಿಸುವ ಮನೋಬಲವನ್ನು ನೀಡುತಿದ್ದರೆಂದರೆ "ಅದು ಅಜ್ಜಿಯ ಮಾತಿನಲ್ಲಿದ್ದ ಶಕ್ತಿಯೋ,? ಕಥೆಯಲ್ಲಿದ್ದ ಶಕ್ತಿಯೋ, ತಿಳಿಯದು.ಆದರೆ ಮನೆ ಹೆಣ್ಣುಮಕ್ಕಳ ಮನೋಬಲ ಸದೃಢಗೊಳಿಸುವ ಯುಕ್ತಿ ಮಾತ್ರ ಅದಾಗಿತ್ತು" ಎಂದರೆ ತಪ್ಪಾಗಲಾರದು.
ಅದೊಂದು ಕಾಲದಲ್ಲಿ ಒಬ್ಬ ಮನೆಯ ಯಜಮಾನನ ಮಾತನ್ನು ಒಂದು ಕುಟುಂಬವಿಡಿ ಒಪ್ಪುತಿತ್ತು.ಅವನು ಶಾಲೆ ಮೆಟ್ಟಿಲು ಹತ್ತಿದ್ದಾನೊ ಇಲ್ಲವೋ, ಬದುಕನ್ನು ಅರಿತುಕೊಂಡು ನ್ಯಾಯ ಹೇಳೋ ಊರಿನ ಮುಖ್ಯಸ್ಥನ ಮಾತಿಗೆ ಇಡಿ ಊರೆ ತಲೆ ಬಾಗುತಿತ್ತು.ಯಾಕೆಂದರೆ ಜೀವನ ಅನುಭವದ ಸಾರ ತಿಳಿದ ಅವರ ಪ್ರತಿ ಮಾತಿನಲ್ಲಿ ತೂಕವಿರುತಿತ್ತು.ಹಾಗೆಯೇ ಅವರ ವ್ಯಕ್ತಿತ್ವದ ಮೇಲೆ ನಂಬಿಕೆಯಿರುತಿತ್ತು.ಈಗ ಎಲ್ಲವು ವರ್ಚುವಲ್.ಒಂದು ಮೆಸೆಜ್ನಲ್ಲಿ ಮಾತು ಮುಗಿಯುತ್ತದೆ. ಎಲ್ಲಿ ಕಂಡರೂ ಸದಾ ಇಂಟರ್ನೆಟ್ ನಶೆಯಲ್ಲಿ ತೇಲಾಡುವ ಜನರು.ಈ ಇಂಟರ್ನೆಟ್ ಜೊತೆ ಸುಳಿಯಲು ಬೇಸರಕೂ ಬೇಸರ ಬಂದಂತೆ ಕಾಣುತಿದೆ.ಈ ಮೊಬೈಲ್ ಮನುಷ್ಯನ ನಡುವೆ ಅಂತರ ಸೃಷ್ಟಿಸಿ ಮಾತುಗಳ ಮರೆಸಿ ಮನುಷ್ಯನನ್ನು ಒಂಟಿಯನ್ನಾಗಿ ಮಾಡುತಿದೆ.ಈ ಒಂಟಿ ಮನುಷ್ಯ ಸ್ವಾರ್ಥಿಯಾಗಿ ತನ್ನ ಜೊತೆ ಅನ್ಯರ ಇರುವಿಕೆಯನ್ನೆ ಮರೆತಿದ್ದಾನೆ.
ಹಿಂದೆ ಒಬ್ಬ ಮನುಷ್ಯನನ್ನು ಮುಖಃತ ಭೇಟಿಯಾಗಿ ಅವನ ಗುರುತು, ವ್ಯಕ್ತಿತ್ವ ಖಾತ್ರಿಯಾದ ಮೇಲೆ ಯಾವುದೆ ಸಂಬಂಧ ಹಾಗೂ ವ್ಯಾಪಾರ ಒಪ್ಪಂದ ನಡೆಸುತಿದ್ದರು.ಇಂದು ಎಲ್ಲವೂ ಅಂತರ್ಜಾಲ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ.ಇದರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳಲು ಹಲವು ನಕಲಿ ವ್ಯವಸ್ಥೆಗಳು,ನಕಲಿ ವ್ಯಕ್ತಿತ್ವಗಳು ಸಮಾಜದಲ್ಲಿ ಸೃಷ್ಟಿಯಾಗಿ ಜನರನ್ನು ಮೋಸ ಮಾಡುತಿದೆ.
ಮಾತು ಜಗದಲ್ಲಿ ಬಹಳ ಶಕ್ತಿಯುತವಾದದು.ಅದಕ್ಕೆ ಮನಸನ್ನು ಗೆಲ್ಲಲು ಗೊತ್ತು,ಮನವನ್ನು ಮುರಿಯಲು ಗೊತ್ತು.ಅದು ಆಡುವವರ ಮೇಲೆ ಅವಲಂಭಿತವಾಗಿರುತ್ತದೆ.ಅನಾವಶ್ಯಕ ಮಾತುಗಳು ಅನವಸರವಾದವುಗಳು ನಿಜ.ಆದರೆ ಮಿತವಾದ ಮಾತು ಮನುಷ್ಯನಿಗೆ ಶೋಭೆ. ಅಗತ್ಯವಾದ ಮಾತುಗಳನ್ನು ಹೇಳಲು ಹಿಂಜರಿದಲ್ಲಿ, ಈ ಜಗತ್ತು ನಮ್ಮನ್ನು ಅದರ ಅವಶ್ಯಕತೆಗೆ ಬೇಕಾದ ಹಾಗೆ ಬಳಸಿಕೊಂಡು ನಮ್ಮತನವನ್ನೆ ಅಳಿಸಿಹಾಕಬಹುದು.
ಮನುಷ್ಯ ಭಾವನೆಗಳಿಗೆ ಏಟು ಬಿದ್ದಾಗ ಒಂಟಿಯಾಗಿರಬೇಕೆಂದು ಬಯಸುವುದು ತಪ್ಪಲ್ಲ..ಆದರೆ ಆ ಒಂಟಿತನದಿಂದ ತಪ್ಪಿಸಿಕೊಳ್ಳಲು ಯಾವುದಕ್ಕೆ ದಾಸನಾಗುತ್ತಾನೆ ಎಂಬುದು ಇಲ್ಲಿ ಬಹಳ ಮುಖ್ಯವಾಗುತ್ತದೆ.ಒಂಟಿತನ ಮರೆಯಲು ಸತ್ಸಂಗ ಮತ್ತು ದುಶ್ಟಟ ಎರಡೂ ಸಹಾಯ ಮಾಡುತ್ತದೆ.ಆದರೆ ಅದರ ನಂತರದ ಪರಿಣಾಮ ಮಾತ್ರ ಬದುಕನ್ನು ಬೇರೆ ಬೇರೆ ದಾರಿಗೆ ಕೊಂಡೊಯ್ಯುತ್ತದೆ.
ಮನುಷ್ಯ ಭಾವನಜೀವಿ. ನೋವಾದಾಗ ಅಳುತ್ತಾನೆ.ಖುಷಿಯಾದಾಗ ನಗುತ್ತಾನೆ.ಇವೆಲ್ಲವನ್ನು ಹಂಚಿಕೊಳ್ಳಲು ಅವನಿಗೆ ಆತ್ಮೀಯರ ಅಗತ್ಯ
ಖಂಡಿತ ಇದೆ.ಆದರೆ ಆ ಆತ್ಮೀಯತೆಯನ್ನು ವಸ್ತುಗಳು ಅಥವಾ ಯಂತ್ರಗಳು ನೀಡಲು ಸಾಧ್ಯವಿಲ್ಲ..ಹಾಗಂತ ಎಲ್ಲರೂ ಎಲ್ಲರಿಗೂ ಆತ್ಮೀಯರಾಗಲೂ ಇಂದಿನ ಜಗದಲ್ಲಿ ಸಾಧ್ಯವಾಗದ ಮಾತು.ಇಂದು ಕೇವಲ ಕೆಲವು ಹೃದಯಗಳಷ್ಟೆ ಆ ಅರ್ಹತೆಯನ್ನು ಉಳಿಸಿಕೊಂಡಿರುವುದು.
ಮನುಷ್ಯನಿಗೆ ಹಣಗಳಿಸಲು ಸಾವಿರ ದಾರಿಯಿರಬಹುದು.ಆದರೆ ಭಾವನೆಗಳು ಹುಟ್ಟಲು ಒಡನಾಟ ಒಂದೇ ಮಾರ್ಗ. ಹಣದಿಂದ ಈ ಜಗತ್ತಲ್ಲಿ ವಸ್ತುಗಳನ್ನು ಮಾತ್ರ ಕಂಡುಕೊಳ್ಳಬಹುದು.ಬಂಧ,ಸಂಬಂಧ ಆತ್ಮೀಯತೆಯನ್ನು ಕಂಡುಕೊಳ್ಳುವ ಏಕೈಕ ಸಾಧನ ನಂಬಿಕೆಯೊಂದೆ.ಒಡೆದ ಹೃದಯ, ಕಡಿದ ಬಂಧಗಳು,ಸುಡುವ ಚಿಂತೆ,ಸಮಸ್ಯೆಗಳ ಕಂತೆ,ಇವುಗಳ ಜೊತೆ ಬದುಕುವಾಗ ಹಣವೆಷ್ಟಿದ್ದರೂ ನೆಮ್ಮದಿ ಸಿಗದು.
ಹೀಗೆಯೇ ಬಂಧಗಳ ಸಂಕೋಲೆ ಕಳಚಿ ಹೊರ ಬಂದ ಮನುಷ್ಯ ಇಂದು ಸಂಬಂಧಗಳಿಂದ ದೂರ ಉಳಿಯುವ ನಿಟ್ಟಿನಲ್ಲಿ ಅಕ್ಕ ಪಕ್ಕ,ಬಂಧು ಬಳಗಗಳ ನಂಟನ್ನು ತೊರೆದು ಒಂಟಿಯಾಗಿ ತನ್ನ ಸಂಸಾರವನ್ನು ಕಟ್ಟಿಕೊಳ್ಳುತಿದ್ದಾನೆ.ಹೀಗೆ ಇಂದು ಮನುಷ್ಯ ತಾನು ಸಮಾಜದಲ್ಲಿ ಬದುಕುತಿದ್ದರೂ ಬೆರೆಯುತಿಲ್ಲ.ಸಮಾಜದ ಹಲವು ಜಂಜಾಟಗಳಿಂದ ಬೆಸೆತ್ತಿರುವ ಅವನಿಗೆ ಬೆರೆಯುವ ಇಚ್ಛೆಯೂ ಈಗಿಲ್ಲ
.
ಹಿಂದೆಲ್ಲ ಮಕ್ಕಳಿದ್ದ ಮನೆಗಳಲ್ಲಿ ಇಂದು ಕೇವಲ ಒಂದೇ ಒಂದು ಮಗು ಇದೆ. ವೀಡಿಯೋ ಗೇಮ್ ಟಾಯ್ ಎಂದು ಬರಿಯ ಯಂತ್ರಗಳ ಜೊತೆ ಆಡುವುದರಿಂದ ಅವರಿಗೆ ಸಂಬಂಧಗಳ ನಂಟಿನ ಬಗ್ಗೆ ಪರಿಚಯವೆ ಇಲ್ಲದಂತೆ ಬೆಳೆದು ಅವರ ಭಾವನಾವಲಯ ಇತ್ತಿಚಿನ ದಿನಗಳಲ್ಲಿ ಶಿಥಿಲಗೊಳ್ಳುತಿದೆ.ಅವರಲ್ಲಿ ಭಾವನೆಗಳು ಇಲ್ಲ ಅಂತ ಅಲ್ಲ.ಅವರಿಗೆ ಅದನ್ನು ವ್ಯಕ್ತಪಡಿಸುವ ಬಗೆಯಾಗಲಿ,ವೇದಿಕೆಯಾಗಲಿ ಬಹಳ ಕಡಿಮೆಯಾಗುತ್ತದೆ. ಹಾಗೆಯೇ ಮೊದಲೆಲ್ಲ ಬಂಧಗಳನ್ನು ಒಂದುಗೂಡಿಸುವ ಸಮಾರಂಭಗಳಾದ ಹಬ್ಬ,ಹರಿದಿನ,ಮದುವೆ,ಮೇಳಗಳೆಲ್ಲವೂ ಕೇವಲ ತೋರಿಕೆಗಾಗಿ ನಡೆಯುವ ಒಂದು ಕಾರ್ಯಕ್ರಮವಾಗಿದೆ ಹೊರತು ಇಲ್ಲಿ ಬಂಧ ಬೆಸೆಯುವ ಯಾವ ಸಂಗಂತಿಗಳು ಕಾಣಸಿಗುವುದಿಲ್ಲ.
ಆದ್ದರಿಂದ ಬೇಜಾರು ಕಳೆಯಲು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚಿಸಿ.ಅವರು ಮೊಬೈಲ್ಗೆ ದಾಸಾರಾಗುವ ಮೊದಲು ಅವರನ್ನ ಮನೆಯವರೊಡನೆ ಮತ್ತು ನಿಸರ್ಗದೊಡನೆ ಬಂಧಿಸಿ.ಮನುಷ್ಯನಿಗೆ ಯಂತ್ರಗಳು ತನ್ನ ಕೆಲಸಗಳಿಗೆ ಉಪಕರಿಸುವ ಸಾಧನಗಳಾಗಬೇಕೆ ಹೊರತು ಅವನ ಸುಂದರ ಬದುಕಿನ ವ್ಯವಸ್ಥೆಯನ್ನು ನಾಶಗೊಳಿಸಿ ಸಮಾಜವನ್ನು ಕೆಡಿಸುವ ಮಂದಗತಿಯ ವಿಷವಾಗಬಾರದು.ಇದನ್ನು ಯೋಚಿಸಬೇಕಾಗಿರುವವನು ಬುದ್ದಿಯಿರುವ ಮನುಷ್ಯ ಹೊರತು ಅವನ ಬುದ್ದಿವಂತಿಕೆಯಿಂದ ಸೃಷ್ಟಿಯಾದ ಯಂತ್ರಗಳಲ್ಲ.
*****************************************
PNRAI





Good information mam.
ReplyDeleteGood luck for your future...
Thank you
Delete