ಭಾವಗಳ ಬಚ್ಚಿಟವನು...
ಬದುಕ ನಿಶೆಯೊಳಗಿನಿಂದ
ಅಧ್ಯಾಯ_3
ಈ ಜಗದಲ್ಲಿ ಹೆಣ್ಣು ಹಾಗೂ ಗಂಡು ಇಬ್ಬರೂ ಹಲವಾರು ಪಾತ್ರಗಳ ಮೂಲಕ ಬದುಕ ಸವೆಸುವವರು.ಇಬ್ಬರ ಬದುಕಿನ ಎಲ್ಲ ಪಾತ್ರಗಳು ಸಮಾಜದ ಅವಿಭಾಜ್ಯ ಅಂಗಗಳೆ.ಅಪ್ಪ ಅಮ್ಮ ಅಕ್ಕ ತಮ್ಮ ಗಂಡ ಹೆಂಡತಿ ಮಗ ಮಗಳು ಅತ್ತೆ ಮಾವ ಹೀಗೆ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ತೂಕವಿದೆ.ಈ ಸಮಾಜದಲ್ಲಿ ಬಹುತೇಕವಾಗಿ ಎಲ್ಲರೂ ಹೆಣ್ಣಿನ ಪಾತ್ರವನ್ನು ಶ್ರೇಷ್ಠ ವೆಂದು ಮೆರೆಸಿ ಗಂಡಿನ ಪಾತ್ರ ವನ್ನು ಮರೆಯಲ್ಲಿಟ್ಟರು.ಈ ಜಗದಲ್ಲಿ ಹೆಣ್ಣು ಕರಗೋ ಮಂಜಾದರೆ ಗಂಡಿನ ಮನ ಗಟ್ಟಿ ಶಿಲೆಯೆಂಬ ಮಾತಿದೆ. ಹೆಣ್ಣಿನ ಬದುಕಿಗೆ ಬೆಸೆದಿರುವ ಗಂಡಿನ ಪಾತ್ರದ ವಿಶೇಷತೆ ಈ ಜಗತ್ತಿನ ಕಣ್ಣಿಗೇಕೆ ಕಾಣುತಿಲ್ಲ.ಈ ಪ್ರಪಂಚದಲ್ಲಿ ಬಹುತೇಕವಾಗಿ ಯಾವದೇ ವಿಷಯದಲ್ಲಾಗಲಿ ಹೋಲಿಕೆ ತಾರತಮ್ಯ ಇವೆಲ್ಲ ಸಾಮಾನ್ಯ.ಆದರೆ ಕೆಲವೊಂದು ಅಸಮನತೆಗಳು ತಾರತಮ್ಯಗಳು ಬೆಳಕಿಗೆ ಬಾರದೆ ತನ್ನೊಳಗೆ ಮರಗುತ್ತಿದೆ. ಅದರಲ್ಲಿಆ ಜೀವದ ಮನದ ಮರೆಯಲ್ಲಿ ಮರುಗುತಿರುವ ಗಂಡಿನ ಭಾವನೆಗಳು ಕೂಡ ಒಂದಾಗಿದೆ.
ತಾಯಿ.... ಎಲ್ಲರಿಗೂ ಪ್ರಿಯವಾದವಳು, ನವಮಾಸ ಹೊತ್ತವಳು, ಗರ್ಭವೇ ಸೀಳುವಂತ ನೋವಿನ ನಡುವೆ ಜನ್ಮ ಇತ್ತವಳು,ಸಾಕಿ ಸಲಹಿದವಳು, ನಿಜ... ಹಾಗದರೆ ಅಪ್ಪ... ಅವಳ ಈ ಪಾತ್ರಕ್ಕೆ ಸಹಾಯಕ ಮತ್ತು ಪೋಷಕ.ಅಪ್ಪ ಅಂದರೆ ಆಕಾಶ.ಸಂಸಾರಕ್ಕೆ ಅವನೇ ಹೊದಿಕೆ.ಜಗದಲ್ಲಿ ಅವನು ಹೊಗಳಿಕೆಗೆ ನಿಲುಕದ ಆಕಾಶ.ಬಣ್ಣಿಸಲಸಾದ್ಯವಾದ ತ್ಯಾಗಗಳ ಶಿಖರ.
ತನ್ನ ಸಂಸಾರದ ಕನಸುಗಳ ನನಸಾಗಿಸಲು ತನ್ನ ಕನಸುಗಳ ಮಾರುವನು.ಅದರಿಂದ ಬಂದ ಆದಾಯದಲ್ಲಿ ಇಡಿ ಕುಟುಂಬವನ್ನು ಸುಖವಾಗಿರಿಸುವನು.ಸಂಸಾರವೆಂಬ ಹೊಲದ ಭದ್ರ ಬೇಲಿಯವನು.ಆದರೂ ಅಪ್ಪನ ಮೌಲ್ಯ ಜಗದಲ್ಲಿ ಸ್ವಲ್ಪ ಅಗ್ಗವೆನಿಸುತಿದೆ ಅಲ್ಲವೇ?
ಹೆಣ್ಣು ಬೆಳೆದು ನಂತರ ಗಂಡನ ಮನೆ ಸೇರಿ ಹೊತ್ತು ಹೆತ್ತು ತಾಯಾಗಿ ಜಗದ ಕಣ್ಣಿಗೆ ಶ್ರೇಷ್ಠವಾದಳು.ಆದರೆ ಗಂಡು ಒಂದೆಡೆ ಬೇರೂರಿ, ತನ್ನನ್ನು ತಾನು ಸದೃಢಗೊಳಿಸಿ ಅದೇ ಹೆಣ್ಣೆಗೆ ಆಸರೆಯಾಗುವನು.ಚಲಿಸುವ ಹೆಣ್ಣಿನ ನೋವು ಭಾವನೆಗಳು ಅವಳೊಡನೆ ಜಗದಲ್ಲೆಲ್ಲ ಓಡಾಡುತ್ತದೆ.ಒಂದೇ ಕಡೆ ನಿಂತು ಗಟ್ಟಿ ಶಿಲೆಯಾದ ಗಂಡಿನ ನೋವು ಭಾವನೆಗಳೆಲ್ಲ ಅವನ ಮನದೊಳಗೆ ಶಿಲೆಯಾಯಿತೆಂದೆನಿಸುತ್ತದೆ.
ಬಾಲ್ಯದಿಂದಲೆ ಗಂಡು ಮಕ್ಕಳಿಗೆ ಬಿದ್ದು ಏಟಾದಾಗ ಅಥವ ಮನ ನೊಂದಾಗ ಮನೆಯವರು ಮಾಡೋ ಮೊದಲ ಪಾಠ "ಏ ಗಂಡು ಮಗ ನೀನು,ಅಳಬಾರದು.ಗಂಡು ಅತ್ತರೆ ಅದು ನಾಚಿಕೆಗೇಡು"ಎಂದು ಅವನಲ್ಲಿರುವ ನೋವ ಭಾವನೆಗಳನ್ನು ಶಿಲೆಯನ್ನಾಗಿಸಲು ಅಲ್ಲಿಂದಲೆ ಶುರು ಮಾಡುತ್ತಾರೆ.. ಹಾಗದರೆ ಗಂಡು ಭಾವುಕನಲ್ಲವೇ? ಅವನಿಗೆ ಭಾವನೆಗಳಿಲ್ಲವೆ?.ನೋವು ದುಃಖಗಳಾದ ಅದನ್ನು ಕೇವಲ ಗಂಡೆಂಬ ಕಾರಣದಿಂದ ತಡೆಹಿಡಿದು ಮನದೊಳಗೆ ಹೆಪ್ಪುಗಟ್ಟಲು ಬಿಡಬೇಕೆ?ಅಪ್ಪ, ಅಣ್ಣ ,ಗಂಡ ,ಮಗ ಎಂಬ ಹಲವು ಪಾತ್ರಗಳನ್ನು ನಿಭಾಯಿಸುವನು ಅವನೇ ಅಲ್ಲವೇ?ಅಲ್ಲಿ ಅವನಿಗೆ ಕಷ್ಟಗಳಿಲ್ಲವೇ?
ಹೆಣ್ಣಿನಂತೆ ಅವನು ಕೂಡ ಭಾವನಜೀವಿ ತಾನೆ?ಭಾವನೆಗಳು ಕೇವಲ ಹೆಣ್ಣಿನ ಸ್ವತ್ತಲ್ಲ.ಗಂಡಿಗೂ ಭಾವನೆಗಳಿವೆ.ಅವನಿಗೂ ನೋವಾಗುತ್ತದೆ.ಅವಮಾನ ಅಪವಾದಗಳಿಂದ ಕೇವಲ ಹೆಣ್ಣು ಮಾತ್ರ ಅಲ್ಲ ಗಂಡು ಕೂಡ ನರಳುತ್ತಾನೆ.ಹೆಣ್ಣಿಗೆ
ಮಾತ್ರ ಪ್ರೀತಿ ಆಸರೆ ಅವಶ್ಯಕ ಅಲ್ಲ.ಗಂಡಿಗೂ ಅದರ ಅವಶ್ಯಕತೆ ಇದೆ.ಮನಸ್ಸು ಇಬ್ಬರಿಗೂ ಇದೆ ಅಂದ ಮೇಲೆ ಖಂಡಿತವಾಗಿಯೂ ಇಬ್ಬರಿಗೂ ಭಾವನೆಗಳಿರುತ್ತದೆ. ಈ ಜಗದಲ್ಲಿ ನಿಜವಾಗಿಯೂ ನೋಡುವುದಾದರೆ ಗಂಡು ಹೆಣ್ಣೆಂಬ ಹೋಲಿಕೆ ವ್ಯತ್ಯಾಸಕ್ಕಿಂತ ಮನುಷ್ಯರಾಗಿ ಪರಸ್ಪರ ಹೊಂದಾಣಿಕೆ ಹಾಗೂ ಗೌರವ ಅಗತ್ಯ.
ಹಲವಾರು ಹೆಣ್ಣು ಮಕ್ಕಳ ಜೊತೆ ಬೆಳೆದ ಗಂಡು ಮಗನ ಒಮ್ಮೆ ನೋಡಿ.ಅಕ್ಕ ತಂಗಿಯರ ಓದಿಸಿ ಮದುವೆ ಮಾಡುವಷ್ಟರಲ್ಲಿ ಅವನ ಅರ್ಧ ಜೀವನ ಮುಗಿದಿರುತ್ತದೆ.ನಂತರ ಮದುವೆಯಾಗಿ ಬರೋ ಮಡದಿ ,ಮಕ್ಕಳಿಗೆ ಉಳಿದರ್ಧ ಬದುಕು.ಅವನು ಅವನಿಗಾಗಿ ಎಂದು ಬದುಕುವನು?ಇದರ ನಡುವೆ ತನ್ನ ಸಂಸಾರವಾಗಿ ಬೆಸೆದುಕೊಂಡಿರುವ ತಾಯಿ, _ತಂಗಿ, ಮಡದಿಯೆಂಬ ಹೆಂಗಳೆಯರ ಸಾಂಸಾರಿಕ ಜಗಳಗಳಲ್ಲಿ ಅಡಕತ್ತರಿಯ ನಡುವಣ ಅಡಿಕೆಯವನು.
ಮಡದಿಯೋ?,ತಾಯಿಯೋ?,ತಂಗಿಯೋ?ಅಪ್ಪನೋ...?ಯಾರನ್ನು ಬಿಟ್ಟುಕೊಡುವಂತಿಲ್ಲ.ಅವನಿಗೆಲ್ಲರೂ ಸಮಾನರೆ?ಆದರೆ ಒಂದಂತೂ ನಿಜ.ಒಬ್ಬ ಗಂಡಿನ ಬದುಕಲ್ಲಿ ತಂಗಿಯ ಪಾತ್ರ ಮಡದಿ ಮಾಡಲಾರಳು.ತಾಯಿಯ ಪಾತ್ರ ತಂಗಿ ಮಾಡಲಾರಳು.ಇದು ಹೆಣ್ಣಿನ ಜೀವನದಲ್ಲೂ ಹೊರತೇನಲ್ಲ.ಇಲ್ಲಿ ಎಲ್ಲರು ಅವರವರ ಪಾತ್ರದ ಪರಿಧಿಯನ್ನು ಅರಿತುಕೊಂಡು ಒಬ್ಬರನ್ನೊಬ್ಬರು ಗೌರವಿಸಿದರೆ ಮಾತ್ರ ಎಲ್ಲರೂ ಸ್ವಲ್ಪ ನೆಮ್ಮದಿಯಾಗಿ ಬದುಕಲು ಸಾಧ್ಯ.ಇಲ್ಲವಾದಲ್ಲಿ ಈ ಬಂಧಗಳು ಅವನಿಗೆ ಕುಣಿಕೆಯಾಗಿ ಬದುಕಿರುವವರೆಗೂ ಅವನ ಕೊರಳ ಬಿಗಿಯುತಿರುತ್ತದೆ.
ಗಂಡು ಹುಟ್ಟಿದಾಗ ಅಮ್ಮನಿಗೆ ಅಂಟಿಕೊಳ್ಳುತ್ತಾನೆ.ಬೆಳೆಬೆಳೆಯುತ್ತ ಅಕ್ಕ ತಂಗಿಯರಿಗೆ ಜೊತೆಯಾಗುತ್ತಾನೆ.ಮದುವೆಯಾಗಿ ಮಡದಿಗೆ ಮನ ಕೊಡುತ್ತಾನೆ.ತಂದೆಯಾದ ಮೇಲಂತೂ ಮಗಳಿಗೆ ದಾಸನಾಗುತ್ತಾನೆ.ಹಾಗದರೆ ಬರಿ ಹೆಣ್ಣಷ್ಟೆ ತ್ಯಾಗದ ಮೂರ್ತಿಯಲ್ಲ.ಪರಸ್ಪರ ಯಾವುದೇ ಸಂಬಂಧದಲ್ಲಿ ಇಬ್ಬರ ತ್ಯಾಗ ಪ್ರೀತಿಯನ್ನು ಅಳೆದು ತೂಗಿದರೆ ಕೊಂಚವು ವ್ಯತ್ಯಾಸ ಬಾರದು.
ಹೆಣ್ಣಿನ ಮನ ಹರಿವ ತೊರೆ.ಅವಳ ಮನದ ನೋವುಗಳೆಲ್ಲ ಕಣ್ಣೀರಲ್ಲಿ ಕರಗಿ ಪರಿಶುದ್ದವಾಗಿ ಹರಿಯುವ ಒಲವ ಭಾವಗಳು ಅವಳ ಬಾಳ ಜೊತೆ ಸಾಗುತ್ತದೆ.ಆದರೆ ಗಂಡಿನ ಮನ ನಿಂತ ಕೆರೆ.
ದುಃಖ ದುಗುಡಗಳೆಲ್ಲ ಮನದಾಳದಲ್ಲಿ ಹೆಪ್ಪುಗಟ್ಟಿ ಅದರ ಮೇಲೆ ಪ್ರೀತಿ ಮಮತೆ ತೇಲುತ್ತಿರುತ್ತದೆ.ಹೀಗೆ ನೋಡಿದರೆ ಹೆಣ್ಣು ಮಾನಸಿಕವಾಗಿ ಶಕ್ತಿವಂತಳು.ಯಾಕೆಂದರೆ ತೊರೆಗೆ ಕಲ್ಲೆಸೆದರೆ ಭಾವಗಳು ಅಲ್ಲೊಲಕಲ್ಲೊಳವಾಗಿ ಅಲೆಗಳನ್ನು ನೋಡಬಹುದು.ಆದರೆ ಕೆರೆಗೆ ಕಲ್ಲೆಸೆದರೆ ಭಾವದಲೆಗಳ ಜೊತೆ ಆಳದಲ್ಲಿರುವ ಕಲ್ಮಶಗಳು ಕೂಡ ಜೊತೆ ಸೇರಿ ಮನವನ್ನು ಗೊಂದಲದ ಗೂಡಾನ್ನಾಗಿಸುತ್ತದೆ.ಆದ್ದರಿಂದ ಯಾರದೇ ಆಗಲಿ ಭಾವನೆಗಳನ್ನು ಕೆಣಕುವ ಮುನ್ನ ಎಚ್ಚರವಿರಲಿ.
ಹೆಣ್ಣಾಗಲಿ, ಗಂಡಾಗಲಿ..ಬಚ್ಚಿಟ್ಟ ಭಾವಗಳ ತಟ್ಟಿ ಎಬ್ಬಿಸಿ ರಮಿಸಲು ಸ್ವಚ್ಛ ಹೃದಯವೊಂದು ಬೇಕು. ಭಾವಗಳೇ ನೋವಾಗಿ ತನ್ನ ಹೃದಯದೊಳಗೆ ಹೆಪ್ಪುಗಟ್ಟಿಸಿ ಕಟ್ಟಿ ಹಾಕಲು ಹರಿತವಾದ ಒಂದೆರಡು ನಾಲಿಗೆಗಳು ಸಾಕು.ಭಾವಗಳು ನಿನ್ನದೇ ಬದುಕು ನಿನ್ನದೇ...ಬೇರೆಯವರ ಪಾಪ ಪರಿತಾಪಗಳ ಬೆಂಕಿಯಲ್ಲಿ ಶಾಪವಾಗಿ ಬೇಯದಂತೆ ಕಾಯ್ದುಕೊಳಬೇಕು. ವಿನೋದ,ವಿಷಾದ,ಬೇಸರ, ಕಾತರ, ಹೀಗೆ ಬದುಕು ಭಾವಗಳ ಸಾಗರ. ಹೃದಯ ನೋವಾದಾಗ ಹೊನಲಾಗಿ ಹರಿಯಲಿ. ನಲಿವು ಬಂದಾಗ ಗರಿಬಿಚ್ಚಿ ಕುಣಿಯಲಿ. ಭಾವಗಳು ಹಂಚಿಕೊಳ್ಳಲೆಂದೆ ಸೃಷ್ಟಿಯಾದವುಗಳು. ಬಚ್ಚಿಟ್ಟು ಕಟ್ಟಿ ಹಾಕಿ ನಮ್ಮೊಳಗೆ ಕರಗಿಸಿಕೊಂಡರೆ ಎದೆಯೊಳಗೆ ಹೆಪ್ಪುಗಟ್ಟಿ ನೋವಾಗುತ್ತದೆ. ಬಿಚ್ಚಿಟ್ಟು, ಕಣ್ಣೀರ ಹೊನಲಾಗಿ ಖಾಲಿಯಾದರೆ ಬದುಕ ಭಾರ ಕರಗಿ ಹಗುರವಾಗುತ್ತದೆ.
ಅವನೂ ಅವಳೂ, ಇಬ್ಬರೂ ಭಾವಜೀವಿಗಳೆ.ನೋವು ನಲಿವುಗಳು ಇಬ್ಬರ ಬಾಳಿನಲ್ಲೂ ಇವೆ.ಎಲ್ಲರ ಬದುಕಿನಲ್ಲಿ ಬವಣೆಗಳು ಸರ್ವೆ ಸಾಮಾನ್ಯ. ಮಾನಸಿಕವಾಗಿ ಶಾರೀರಿಕವಾಗಿ ನೋವಾದಾಗ ಮರುಗುವುದು ಮನುಷ್ಯನ ಸಾಮಾನ್ಯ ಲಕ್ಷ್ಮಣ.ಇದೇ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ.ಹೆಣ್ಣು ಅಬಲೆಯು ಅಲ್ಲ ಸಬಲೆಯು ಅಲ್ಲ.ಗಂಡು ಬಲಶಾಲಿಯೂ ಅಲ್ಲ ಬಲಹೀನನೂ ಅಲ್ಲ.ಇಬ್ಬರಿಗೂ ತನ್ನದೆ ಆದ ಶಕ್ತಿ ಸಾಮರ್ಥ್ಯಗಳು ಇವೆ ಹಾಗೆಯೇ ಬಲಹೀನತೆಗಳು ಇವೆ.ಈ ಜಗದಲ್ಲಿ ಇಬ್ಬರಿಗೂ ತನ್ನದೇ ಆದ ಸ್ಥಾನಮಾನಗಳಿವೆ.ಇಬ್ಬರೂ ಈ ಸಮಾಜದ ಅವಿಭಾಜ್ಯ ಅಂಗಗಳು.ನಮ್ಮ ದೇಹದಲ್ಲಿನ ಭಾಗವಾದ ಹೃದಯ ಹಾಗೂ ಮೆದುಳನ್ನು ಹೋಲಿಸಲು ಅಸಾಧ್ಯವೋ ಹಾಗೆ ಸಾಮಾಜಿಕವಾಗಿ ಗಂಡು ಹೆಣ್ಣನ್ನು ಹೋಲಿಸಲು ಸಾಧ್ಯವಿಲ್ಲ. ಇಲ್ಲಿ ಅಳೆದು ತೂಗಿ ವ್ಯಾತ್ಯಾಸ ಹುಡುಕುವುದರ ಬದಲು ಪರಸ್ಪರ ಅರಿತುಕೊಂಡು ಗೌರವಿಸಿದರೆ ಎಲ್ಲ ಭಾಂಧವ್ಯಗಳು ಸುಂದರವಾಗಿರುವುದಲ್ಲವೇ????...
PNRai


Very nice..
ReplyDeleteThank You
DeleteThis comment has been removed by the author.
Delete