ನಾವು ಈ ಜಗದಲ್ಲಿ ಯಾರನ್ನೇ ಭೇಟಿಯಾಗಲಿ ಪ್ರತಿ ಜೀವ ಒಂದೊಂದು ನೋವಿನ ಕಥೆಯನ್ನು ಹೇಳುತ್ತದೆ. ಪರರಿಂದ ತನಗಾದ ಅನ್ಯಾಯ, ಕಠಿಣ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಸದೃಢಗೊಳಿಸಿಕೊಂಡು ಅದನ್ನು ನಿಭಾಯಿಸಿದ ರೀತಿ, ತಮ್ಮ ಭಯಾನಕ ಅನುಭವಗಳು, ಹೀಗೆ ಹತ್ತು ಹಲವಾರು ಭಾವನಾತ್ಮಕವಾದ ಅನುಭವ ಕಥೆಗಳನ್ನು ಕೇಳುತ್ತೇವೆ.ಪ್ರತಿಯೊಬ್ಬರ ಕಥೆಯಲ್ಲೂ ನ್ಯಾಯ ಅವರ ಪರವಿರುತ್ತದೆ. ಅನ್ಯಾಯ ಇತರರಿಂದ ಆಗಿರುತ್ತದೆ. ಆದರೆ ಇಬ್ಬರ ಕಥೆ ಕೇಳಿ ಇಬ್ಬರನ್ನ ಎದುರು ಬದುರು ನಿಲ್ಲಿಸಿ ಕೇಳಿದರೆ ಅಲ್ಲಿ ಕಥೆಯೆ ಬೇರೆ ಇರುತ್ತದೆ. ಇಲ್ಲಿ ಪ್ರತಿ ಘಟನೆಯಲ್ಲೂ ಮನುಷ್ಯ ತನ್ನ ಒಳ್ಳೆಯತನವನ್ನು ತೋರಿಸಲು ಬಯಸುತ್ತಾನೆ ಹೊರತು ತಪ್ಪನಲ್ಲ. ಇದು ಮನುಷ್ಯ ಸಹಜ ಗುಣ. ಯಾಕೆಂದರೆ ಈ ಜಗತ್ತು ಬೇರೆಯವರ ತಪ್ಪು ಕಂಡರೆ ಸಾಕು, ಅವರ ಬದುಕನ್ನು ಹುರಿದು ಹಿಂಸೆ ಮಾಡುತ್ತದೆ.


 ಇಂತಹ ಕಥೆಗಳುಈ ಜಗತ್ತಿನಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಇರುತ್ತದೆ. ಇಲ್ಲಿ ಒಂದು ಕುತೂಹಲಕರವಾದ ವಿಚಾರವೆಂದರೆ ಇಲ್ಲಿ ನಮ್ಮ ಬದುಕಿನ ಕಥೆಗೆ ನಾವೇ ಹೀರೋಗಳು. ನಮ್ಮ ಪ್ರಕಾರ ನಾವೇ ಒಳ್ಳೆಯವರು. ಕೇಡು ಹಾನಿಗಳು ನಮಗೆ ಇತರರಿಂದ ಆಗಿರುತ್ತದೆ ಹೊರತು ಅಲ್ಲಿ ನಮ್ಮ ತಪ್ಪುಗಳು ಏನು ಇರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.ಆದರೆ ನಿಜವಾಗಿ ನೋಡಿದರೆ ಬಹಳಷ್ಟು ಸಲ ತಪ್ಪುಗಳು ಎರಡೂ ಕಡೆ ಇರುತ್ತದೆ. ಆದರೆ ನಾವು ಒಪ್ಪಲು ಸಿದ್ದವಿರುವುದಿಲ್ಲ. ಕಾರಣ ಸಮಾಜದ ಭಯ.


ನಾವು ಒಂದು ಘಟನೆ ನಡೆದಾಗ ಅಥವಾ ಬದುಕಿನಲ್ಲಿ ಕಷ್ಟಕರವಾದ ಪರಿಸ್ಥಿತಿ ಎದುರಾದಾಗ ನಮ್ಮ ಕಣ್ಣಿಗೆ ಕಾಣುವುದನ್ನಷ್ಟೆ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಯಾವುದೇ ಒಂದು ಘಟನೆ ಅಥವಾ ಪರಿಸ್ಥಿತಿಗೆ ಹತ್ತು ಹಲವು ಮುಖಗಳು, ಹಲವು ಆಯಾಮ ಹಾಗೂ ದೃಷ್ಟಿಕೋನವಿರುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಆ ಘಟನೆಯ ಸುತ್ತ ಹಲವು ವಿಚಾರಗಳು ಆಳದಲ್ಲಿ ಅಡಗಿರುತ್ತದೆ. ಆ ಘಟನೆಗೆ ಒಳಗಾದ ವ್ಯಕ್ತಿಗೆ ಆ ಪರಿಸ್ಥಿತಿಯಲ್ಲಿ ಕಷ್ಟದ ಭಾರ ಮತ್ತು ನೋವಿನ ಆಳ ಅವನನ್ನು ಕುಗ್ಗುವಂತೆ ಮಾಡಿ ಜಗದ ತುಂಬ ಅವನ ಬೊಬ್ಬೆಯಷ್ಟೆ ಕೇಳುತ್ತದೆ. ಆ ಘಟನೆಗೆ ಕಾರಣವಾದ ಅದೆಷ್ಟೋ ಕಹಿ ಸತ್ಯಗಳು ಆ ಸ್ಥಳದಲ್ಲೆ ಬೊಬ್ಬಿಡುವ ವ್ಯಕ್ತಿಗಳ ಆಕ್ರಂದನಕ್ಕೆ ಅಂಜಿ ಮಣ್ಣಡಿಗೆ ಹೋಗುತ್ತದೆ.


ಈ ಜಗದಲ್ಲಿ ಒಂದು ಘಟನೆ ನಡೆದಾಗ ಸಾಕ್ಷಿ ಅನ್ನುವ ವಿಚಾರದ ಮೇಲೆ ಅದೆಷ್ಟೋ ವಿಷಯಗಳು ಸೃಷ್ಟಿಯಾಗಿ ಕೆಲವೊಮ್ಮೆ ಸತ್ಯ ಸೋತು ಹೋಗುತ್ತದೆ ಇನ್ನೂ ಕೆಲವೊಮ್ಮೆ ಸತ್ತೆ ಹೋಗುತ್ತದೆ.ಇಂದು ಜಗದ ತುಂಬಾ ಸದ್ದು ಗದ್ದಲ ಮಾಡುವ ವಿಚಾರ ಹಾಗೂ ವ್ಯಕ್ತಿಗಳಿಗೆ ಬೆಲೆ ಹೆಚ್ಚು. ವಿಚಾರ ಒಳ್ಳೆಯದೋ ಕೆಟ್ಟದೋ, ಕೇವಲ ಜೋರಾಗಿ ಸದ್ದಾದರೆ ಸಾಕು ಅದೇ ನಿಜವೆಂದು ಜಗತ್ತು ಒಂದಿಷ್ಟು ಯೋಚಿಸದೆ ಅದರ ಹಿಂದೆ ಓಡುತ್ತದೆ.


ಇಂದಿನ ಜಗದಲ್ಲಿ ನಡೆಯುವ ಪ್ರತಿ ಘಟನೆಯೂ,ಸತ್ಯ ಸುಳ್ಳು, ನ್ಯಾಯ ಅನ್ಯಾಯ ಇವುಗಳಿಗಿಂತ ಹೆಚ್ಚಾಗಿ ಪರ ಹಾಗೂ ವಿರೋಧದ ಮೇಲೆ ಅವಲಂಭಿತವಾಗಿರುತ್ತದೆ. ಆದರೆ ನಿಜವಾಗಿಯೂ ಒಂದು ಘಟನೆ ನಡೆದಾಗ ಅದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳುಗಳಿವೆ, ನ್ಯಾಯ ಅನ್ಯಾಯದ ತಕ್ಕಡಿಯಲ್ಲಿ ಯಾವುದು ಹೆಚ್ಚು ತೂಗುತ್ತಿದೆ, ಯಾವುದು ಸರಿ ಯಾವುದು ತಪ್ಪು ಎಂದು ಆ ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತೀರ್ಪು ಬಂದ ಮೇಲೆ ಅದಕ್ಕೆ ಪರ ವಿರೋಧಗಳು ವ್ಯಕ್ತವಾಗುವುದಕ್ಕೆ ಒಂದು ಬೆಲೆ ಇದೆ. ಆದರೆ ಇಲ್ಲಿ ಯಾರಿಗೂ ಅದನ್ನು ಪರಿಶೀಲಿಸುವ ತಾಳ್ಮೆ ಸಂಯಮ ಯಾವುದು ಇಲ್ಲ.ತನ್ನ ಸುಳ್ಳನ್ನು ಸತ್ಯ ಎಂದು ಸಾಭೀತುಪಡಿಸುವ ಬಲವಂತ ನಿರಪರಾಧಿಯಾಗುತ್ತಾನೆ.ಬಲಹೀನ ಅಪರಾಧಿಯಾಗಿ ಕಾಣುತ್ತಾನೆ. 





ಬಹಳಷ್ಟು ಜನ ಈ ಜಗದಲ್ಲಿ ಹಣದಿಂದಲೇ ಎಲ್ಲವನ್ನು ಕೊಂಡುಕೊಳ್ಳಬಹುದು ಎಂದುಕೊಂಡಿದಿದ್ದಾರೆ. ಆದರೆ ಈ ಜಗದಲ್ಲಿ ಕಣ್ಣೀರು ಮತ್ತು ಕರುಣಾಜನಕ ಪರಿಸ್ಥಿತಿಗಳು ಕೂಡ ಅತೀ ಮುಖ್ಯ ಪಾತ್ರ ವಹಿಸುತ್ತದೆ.ಈ ಜಗತ್ತಿನಲ್ಲಿ ಭಾವನಾತ್ಮಕ ವ್ಯಕ್ತಿಗಳು ಕಣ್ಣೀರಿಗೆ ಬಹುಬೇಗ ಕರಗುತ್ತಾರೆ. ಯಾವಾಗ ಒಂದು ವಿಷಯ ಜನ ಬಲದ ಮೇಲೆ ಅವಲಂಭಿತವಾಗಿರುತ್ತದೆಯೋ ಇಲ್ಲಿ ದುಡ್ಡಿಗಿಂತ ಭಾವನೆಗಳು ಅತೀ ಹೆಚ್ಚು ಪಾತ್ರ ವಹಿಸುತ್ತದೆ. ಕೆಲವರಿಗೆ ಭಾವನೆಗಳು ಬಹಳ ಖಾಸಾಗಿ ಸಂಗತಿಯಾಗಿದ್ದರೆ ಇನ್ನೂ ಕೆಲವರಿಗೆ ಅವುಗಳು ಮಾರಾಟದ ವಸ್ತುವಾಗಿರುತ್ತದೆ. ಅಂತಹವರು ಇಂತಹ ಸಂಧರ್ಭಗಳನ್ನು ತಮ್ಮ ಅವಕಾಶಕ್ಕೆ ಬಳಸಿಕೊಳ್ಳುತ್ತಾರೆ.ಆದರೆ ವಿಷಾದವೆಂದರೆ ಕೆಲವೊಂದು ಮನುಷ್ಯರ ಮುಖವಾಡಗಳು ಕೊನೆಯವರೆಗೂ ಕಳಚಿ ಬೀಳುವುದೇ ಇಲ್ಲ.


ಇಲ್ಲಿ ನೇರ ನಡೆನುಡಿಯವನು ಒರಟ. ವಿನಯವಾಗಿರುವವನು ಮೂರ್ಖ. ಸ್ನೇಹಪರ ವ್ಯಕ್ತಿ ಚಾರಿತ್ರ್ಯಹೀನ. ಮುಗ್ದನಾಗಿದ್ದರೆ ಪೆದ್ದ. ಸಲುಗೆಯಿಂದಿರುವನು ಸಮಯಸಾಧಕ. ಗಂಭೀರವಾಗಿದ್ದರೆ ಆತ ಬಿಗುಮಾನ ಇರುವವನು. ಅಂದವಾಗಿದ್ದರೆ ಜಂಬ ಹೆಚ್ಚು. ಕುರುಪಿಯಾದರೆ ಯಾರು ಮೆಚ್ಚುವವರು. ಎಲ್ಲದರಲ್ಲೂ ಹುಳುಕು ಹುಡುಕುವವರು ಪರರನ್ನು ಒಳ್ಳೆಯವರು ಎಂದು ಹೇಗೆ ಮೆಚ್ಚುವರು?


ಈ ಸಮಾಜ ಬೇರೆಯವರು ತಪ್ಪು ಸಿಕ್ಕಾಗ ಜಗದಲ್ಲೆಲ್ಲೂ ತಪ್ಪಿತಸ್ಥನೇ ಇಲ್ಲ, ಆ ವ್ಯಕ್ತಿ ಒಬ್ಬನೇ ತಪ್ಪು ಮಾಡಿರುವುದು, ಅವನು ಕೆಟ್ಟವನು,ಎಂಬ ರೀತಿಯಲ್ಲಿ ಬಿಂಬಿಸುತ್ತದೆ. ಆದರೆ ಯಾರದೇ ಬದುಕ ಪುಸ್ತಕದ ಪುಟ ತೆರೆದು ನೋಡಿದರು ಬದುಕಿನ ಪ್ರತಿ ಸಾಲಿಗೊಂದು ತಪ್ಪು ನಡೆದಿರುತ್ತದೆ. ಅದರಲ್ಲಿ ತಿದ್ದಿಕೊಂಡವರು ಕೇವಲ ಕೆಲವೇ ಕೆಲವರಾದರೆ ಮುಚ್ಚಿಕೊಂಡು ಬಾಳುವವರು ಹಲವರು. ಇನ್ನೂ ಕೆಲವರು ಆ ತಪ್ಪುಗಳನ್ನು ಬೇರೆಯವರ ಮೇಲೆ ಹೇರಿ ಆರಾಮವಾಗಿರುತ್ತಾರೆ. ಆದ್ರೆ ತಪ್ಪು ಮಾಡದೇ ಇರುವವರು ಯಾರು ಇಲ್ಲ. ಆದರೂ ಸಹ ಪರರ ತಪ್ಪು ಕಂಡರೆ ಅದನ್ನು ಮೆರೆಸಿ ಅವರನ್ನು ದಂಡಿಸಿ, ದಹಿಸುವವರೆಗೂ ಬಿಡುವುದಿಲ್ಲ. ಈಗ ಇಲ್ಲಿ ಯಾರು ಒಳ್ಳೆಯವರು?



ಬೇರೆಯವರಿಗೆ ಇಷ್ಟವಾಗುವಂತೆ ಇದ್ದರೆ ನಾವು ತುಂಬಾ ಒಳ್ಳೆಯವರು. ಒಂದು ಸಲ ಅವರನ್ನು ಉಲ್ಲಂಘನೆ ಮಾಡಿದರೆ ನಮ್ಮಷ್ಟು ಕೆಟ್ಟವರು ಯಾರು ಇರಲ್ಲ. ಇನ್ನೂ ಕೆಲವರಿಗೆ ನಾವು ಸಹಾಯಕ್ಕೆ ಬೇಕು ಎಂದಾಗ ಒಳ್ಳೆಯವರಾಗಿ ಕಾಣುತ್ತೇವೆ. ಬೆನ್ನು ಮಾಡಿದರೆ ಸಾಕು ಕಾಣೋದೆಲ್ಲ ನಮ್ಮ ಹುಳುಕುಗಳೇ.


ನಾವು ಹೇಗಿದ್ದರೂ ತಪ್ಪು ಎನ್ನುವ ಜಗದಲ್ಲಿ ಒಳ್ಳೆಯವರನ್ನು ಹುಡುಕಲು ಸಾಧ್ಯವೇ? ಇಲ್ಲಿ ಒಳ್ಳೆಯವರು ಇಲ್ಲ, ಕೆಟ್ಟವರು ಇಲ್ಲ. ಪ್ರತಿಯೊಬ್ಬನಲ್ಲೂ ಒಳ್ಳೆಯತನ ಮತ್ತು ಕೆಡುಕಿದೆ. ನಮಗೇನೂ ಬೇಕು ಅದನ್ನು ಅವರಿಂದ ಆಯ್ದುಕೊಂಡು ಅವರಿಷ್ಟಕ್ಕೆ ಅವರನ್ನು ಬದುಕಲು ಬಿಡುವುದು ನ್ಯಾಯವಲ್ಲವೇ? ನಮ್ಮದೇ ಹುಳುಕುಗಳು ಸಾವಿರ ಇರುವಾಗ ಅದನ್ನು ಸರಿಪಡಿಸಿಕೊಂಡು ಬಾಳುವುದು ಬಿಟ್ಟು ಅವರಿವರ ಒಡಕು ಹುಡುಕಿ ಪ್ರಮಾಣ ಪತ್ರ ಕೊಡಲು ನಾವ್ಯಾರು? ಹಾಗಂತ ಬೇರೆಯವರಿಂದ ನೋವಾದಾಗ ಅಥವಾ ಸಹಾಯವಾದಾಗ ಅದನ್ನು ವ್ಯಕ್ತಪಡಿಸದೇ ಇರುವುದು ಸರಿಯಲ್ಲ. ಆದರೆ ಅದನ್ನು ವ್ಯಕ್ತಪಡಿಸುವ ರೀತಿ ಒಳ್ಳೆಯದಾದರೆ ಕೇವಲ ಆ ವ್ಯಕ್ತಿಗೆ ಅದು ಉಡುಗೊರೆಯಾಗಿ ಇತರರಿಗೆ ಮಾದರಿಯಾಗುವಂತಿರಬೇಕು. ಕೆಡುಕಾದಾದರೆ ಅದು ಆ ವ್ಯಕ್ತಿಗೆ ಮಾತ್ರ ಶಿಕ್ಷೆಯಾಗಿ ಇತರರಿಗೆ ಪಾಠವಾಗುವಂತಿರಬೇಕು. 












Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..