ಸಾರ ಕಳೆದುಕೊಳ್ಳುತಿರುವ ಸಂಸಾರ
ಹಾಗಾಗಿ ಅವಳು ಮನೆ ಹಾಗೂ ಮನೆಯವರ ಮನದ ಮೂಲೆ ಮೂಲೆಗಳನ್ನು ಬಲ್ಲವಳಾಗಿದ್ದಳು.ಮನೆ ಹಾಗೂ ಸಂಸಾರದ ಪೂರ್ತಿ ಹೊಣೆಗಾರಳು ಅವಳೇ ಆಗಿದ್ದರಿಂದ ಸಂಸಾರ ಸಾರ ಕಳೆದುಕೊಂಡರೆ ಅದಕ್ಕೆ ಕಾರಣ ಅವಳೇ ಎಂದು ಜಗತ್ತು ಅವಳನ್ನು ದೂಷಿಸುತಿತ್ತು. ಇದು ತಲೆತಲಾಂತರದಿಂದ ಕೇಳಿಕೊಂಡು ಬಂದಿರುವ ಮಾತುಗಳು.ಅದಲ್ಲದೆ ಈ ಜಗತ್ತಿನಲ್ಲಿ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವವರಿಗಿಂತ,ಸ್ವಲ್ಪ ಜಾಗ ಸಿಕ್ಕರೆ ಅದನ್ನು ಬೆರೆಯವರ ತಲೆ ಮೇಲೆ ಹಾಕಿ ಜಾರಿಕೊಳ್ಳುವವರೆ ಹೆಚ್ಟು. ಅದರಲ್ಲೂ ಅನಿಷ್ಟಕ್ಕೆಲ್ಲ ಶನೀಶ್ವರನೆ ಹೊಣೆ ಅನ್ನೋ ಹಾಗೆ ,ಹೆಣ್ಣು ಯಾವುದೇ ಒಂದು ಪ್ರಕರಣದ ಸಣ್ಣ ಭಾಗವಾಗಿದ್ದರೂ ಆಕೆಯ ಮೇಲೆ ಅಪವಾದ ಬರುವುದು ಸಹಜವಾಗಿತ್ತು.
ಇದಕ್ಕೆ ಒತ್ತು ಕೊಡುವಂತೆ "ಹೆಣ್ಣಿಗೆ ಹೆಣ್ಣೇ ಶತ್ರು " ಎಂಬುದನ್ನು ರುಜುವಾತು ಮಾಡಲೆಂದೆ ಜಗದ ತುಂಬ ಕಾಣಸಿಗುವಂತ ಅತ್ತೆ ಸೊಸೆ ವೈಶಮ್ಯ ಒಂದು ಮನೆಯ ನೆಮ್ಮದಿಯನ್ನು ಕೆಡಿಸುತಿತ್ತು. ಅತ್ತೆಯಾಗಲಿ ಸೊಸೆಯಾಗಲಿ ಇದು ಕೇವಲ ಹೆಣ್ಣಿನ ಜೀವನದ ಒಂದು ಪಾತ್ರವಷ್ಟೆ.ತಾಯಿಯಾಗಿ ಮಗಳಾಗಿ ,ಅಕ್ಕ ತಂಗಿಯಾಗಿ ಮಡದಿಯಾಗಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುವ ಹೆಣ್ಣು, ಸೊಸೆ ಅಥವ ಅತ್ತೆ ಪದವಿ ಸಿಕ್ಕ ತಕ್ಷಣ ಬದಲಾಗುತ್ತಾಳೆ ಎಂದರೆ ಅದಕ್ಕೆ ಕಾರಣಗಳಿರಬಹುದಲ್ಲವೇ?
ಹಿಂದೆ ನಾವು ಹೆಚ್ಚಾಗಿ ಅವಿಭಕ್ತ ಕುಟುಂಬಗಳನ್ನು ನೋಡುತ್ತಿದ್ದವು. ಇಲ್ಲಿ ಹೆಣ್ಣು ಮಕ್ಕಳ ಕಲಿಕೆಯ ಪ್ರೋತ್ಸಾಹ ಅಷ್ಟಕಷ್ಟೆ. ಪೋಷಕರು ಅಷ್ಟೊ ಇಷ್ಟೋ ಕಲಿಸಿ ನಂತರ ಮದುವೆ ಮಾಡಿ ತವರಿನ ಜವಬ್ದಾರಿ ಕಳೆದುಕೊಳ್ಳುತಿದ್ದರು.
ಆಗ ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮದುವೆ ಸುಮಾರು ಹದಿನೆಂಟರಿಂದ ಇಪ್ಪತ್ತನೆಯ ವಯಸ್ಸಿಗೆ ಆರಂಭವಾಗುತ್ತಿತ್ತು.
ಆಗ ಎಲ್ಲ ಹೆಣ್ಣು ಮಕ್ಕಳಿಗೂ ಮದುವೆ ಒಂದು ಸುಂದರ ಕನಸು. ಹಾಗೆಯೇ ಬದುಕು ಬದಲಾಗುವ ಒಂದು ಕಾಲಘಟ್ಟ ಕೂಡ.ಪ್ರತಿಯೊಬ್ಬ ಹೆಣ್ಣು ಕೂಡ ಮದುವೆಯ ನಂತರ ಬದುಕು ಬದಲಾಗುತ್ತದೆ.ಜಗದ ಸಕಲ ಸುಖವೆಲ್ಲ ಕಾಲಡಿಯಲ್ಲಿ ಬಂದು ಬೀಳುತ್ತದೆ. ತನ್ನ ತವರು ಮನೆಯಲ್ಲಿ ಸಿಗದ ಸುಖವೆಲ್ಲ ಗಂಡನ ಮನೆಯಲ್ಲಿ ಸಿಗುತ್ತದೆ ಎಂಬ ಭ್ರಮೆಯಲ್ಲೇ ಹಸೆಮಣೆ ಏರುತ್ತಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಕಾಣದಿರೊ ನಾಳೆಯ ಕನಸುಗಳೊಂದಿಗೆ ಅವರು ತನ್ನ ತವರಿನ ಬದುಕನ್ನು ಕಳೆದಿರುತ್ತಾರೆ.ಆ ಸಮಯದಲ್ಲಿ ಬದುಕು ಕೂಡ ಅವರನ್ನು ಅವರಿಷ್ಟದ ಹಾಗೆ ಬಿಟ್ಟು ತನ್ನ ಪಾಡಿಗೆ ತಾನು ಕಾಲಚಕ್ರದೊಡನೆ ಪ್ರಯಾಣ ಮಾಡುತಿರುತ್ತದೆ.ಅದು ತನ್ನ ಕನಸಿನ ಕಲ್ಪನೆ,ಅಥವಾ ಭ್ರಮೆ ಎಂಬ ಸಣ್ಣ ಕಲ್ಪನೆ ಕೂಡ ಅವರಿಗಿರಲ್ಲ.ಆದರೆ ವಾಸ್ತವದ ಅರಿವಾದಾಗ ಆಕೆಯ ಕನಸುಗಳು ನುಚ್ಚು ನೂರಾಗಿರುತಿತ್ತು.ಆ ಚೂರಾದ ಕನಸುಗಳು ಚೂರಿಯಾಗಿ ಅವಳ ಬದುಕನ್ನೆಲ್ಲ ಚುಚ್ಚುತಿತ್ತು.ಕೊನೆಗೆ ,ಗೌರವ ಪ್ರತಿಷ್ಠೆಗೆ ಅಂಜಿಯೋ,ಅಥವಾ ತವರಿಗೆ ಹೊರೆಯಾಗಬಾರದೆಂದೊ,ಅಗ್ನಿಸಾಕ್ಷಿಯಾಗಿ ಕೊಟ್ಟ ಮಾತಿಗೆ ಕಟುಬಿದ್ದೋ ಆಕೆ ತನ್ನ ಬಿರುಕು ಬಿದ್ದ ಸಂಸಾರವನ್ನು ಎಲ್ಲ ಕಡೆ ಹೊಂದಿಸಿ ಸಮದೂಗಿಸಿಕೊಂಡು ಹೋಗುತಿದ್ದಳು.
ಇನ್ನೂ ಇತ್ತಿಚಿನ ದಿನಗಳಿಗೆ ಬಂದರೆ,ಓದು ಕಾಲೇಜ್ ಎಂದು ಹುಡುಗಾಟದಲ್ಲೆ ಬೆಳೆದ ಹೆಣ್ಣಿಗೆ ಮದುವೆಯ ದಿನದವರೆಗೆ ಜವಾಬ್ದಾರಿಯೆಂದರೆ ಏನೆಂದೆ ಗೊತ್ತಿರಲ್ಲ.
ಓದು ಊಟ ತಿಂಡಿ,ಸಣ್ಣ ಪುಟ್ಟ ಮನೆಗೆಲಸಗಳ ಹೊರತು ಬೇರೆ ಯಾವುದೇ ಜವಾಬ್ದಾರಿಯಿಲ್ಲದ ಮನೆಮಗಳೊಬ್ಬಳ ಬದುಕು ಮದುವೆಯ ಮಾರನೆಯ ದಿನದಿಂದ ಬದಲಾಗುತ್ತದೆ ಎಂದರೆ ಒಪ್ಪುವಂತಹ ಮಾತಲ್ಲ.
ಆದರೂ ಬದಲಾವಣೆ ಜಗದ ನಿಯಮ.ಹೊಸ ಜಾಗ ಹೊಸ ಜವಾಬ್ದಾರಿಗಳೊಂದಿಗೆ ಹೊಸ ಸಂಬಂಧಗಳ ಬೆಸುಗೆ.ಯಾವುದೆ ಒಂದು ಜಾಗವಾಗಲಿ , ವ್ಯಕ್ತಿಯಾಗಲಿ ಹೊಸದೆಂದಾಗ ಅಲ್ಲಿ ಅತಿಯಾದ ಕುತೂಹಲವು ಇರುತ್ತದೆ, ಹಾಗೆಯೇ ಅನಿರೀಕ್ಷಿತ ಅಡೆತಡೆಗಳು ಬರುತ್ತದೆ. ಆಗ ಅಲ್ಲಿಗೆ ಹೊಂದಿಕೊಳ್ಳಲು ಸಮಯ ಬೇಕಲ್ಲವೇ?ಅವಳಿಗೆ ಆ ಸಮಯ ಕೊಡುವ ತಾಳ್ಮೆ ಆ ಮನೆಯವರಿಗೆ ಇಲ್ಲದಾದಾಗ ಆ ಸಂಸಾರದಲ್ಲಿ ಬಿರುಕು ಬೀಳುತ್ತದೆ.
ಕಲ್ಲು ಮುಳ್ಳಿಲ್ಲದ ಜಾಗ ಜಗದೊಳು ಸಿಗಲಾರದು.ಹಾಗೆಯೇ ಕೊರತೆಯಿರದ ಮನುಷ್ಯನು ಸಿಗುವುದು ಅಸಾಧ್ಯ.ಇಲ್ಲಿ ಕೊರತೆ ಅವಳಲ್ಲು ಇರಬಹುದು,ಆ ಮನೆಯವರಲ್ಲೂ ಇರಬಹುದು.ಆದರೆ ಇಂದೂ ಕೂಡ ಈ ಜಗದಲ್ಲಿ ಅವಳ ಕೊರತೆಗಳಿಗೆ ಮಾತ್ರ ಹೆಚ್ಚಿನ ಪ್ರಧಾನ್ಯತೆ ನೀಡುತಿರುವುದು ವಿಪರ್ಯಾಸಕರ ಸಂಗತಿ.
ತಪ್ಪಾದಾಗ ಕೆಲವೊಂದೆಡೆ ಮನ್ನಿಸಿ ಇನ್ನೂ ಕೆಲವೆಡೆ ದಂಡಿಸಿ ಸಾಗುವುದು ಬದುಕಲ್ಲಿ ಅನಿವಾರ್ಯ. ಆದರೆ ಕೇವಲ ಅವಳ ಕೊರತೆಗಳ ಎತ್ತಿ ಹಿಡಿದು ಅದರ ಕೆಳಗೆ ಅನ್ಯರ ಕೊರತೆಗಳ ಮುಚ್ಚಿದಾಗ ಆ ಮುಚ್ಚಿರುವ ಕೊರತೆಗಳು ಅವಳ ಬದುಕನ್ನು ಕೊರೆಯುವಂತೆ ಮಾಡುತ್ತದೆ.ಹೌದು ಕೆಲವೊಬ್ಬರ ಕೊರತೆಗಳನ್ನು ಮನ್ನಿಸಿ ಅವರೊಡನೆ ಹೊಂದಿಕೊಂಡು ಬಾಳುವಷ್ಟರಲ್ಲಿ ಬದುಕೇ ಕೊರಗಿ ಕರಗಿರುತ್ತದೆ.
ಒಬ್ಬ ಹೆಣ್ಣಿಗೆ ಮದುವೆಯ ನಂತರ ಸಂಸಾರವೇನೆಂದು ಅರಿವಾಗಲು ಶುರುವಾದಾಗ, ಬದುಕಿನ ಸಣ್ಣ ಏರಿಳಿತದ ಅಲೆಗಳು ಬಾಳ ದಡವನ್ನು ಅಪ್ಪಳಿಸಲು ಶುರು ಮಾಡುವುದು.
ತವರು ಮನೆಯಲ್ಲಿ ಇರುವಾಗ ತನ್ನ ಮನೆಯಲ್ಲಿ ಸಿಗದ ಸುಖ ಗಂಡನ ಮನೆಯಲ್ಲಿ ಸಿಗಬಹುದೆಂಬ ಭ್ರಮೆಯಲ್ಲಿ ಬಂದಿರುತ್ತಾಳೆ. ಆದರೆ ವಾಸ್ತವ ಬೇರೆ. ಇದು ಅರಿವಾದಾಗ ಮೊದಲಿಗೆ ಅವಳ ಕನಸಿನ ಸೌಧ ಕುಸಿಯಲಾರಂಭಿಸುತ್ತದೆ.ಮದುವೆಯಾದ ಮೇಲೆ ನಿಜವಾದ ಬದುಕಿನ ಹೊಸ ಮಜಲು ಆರಂಭವಾಗುತ್ತದೆ. ಆಗ ಅವಳು ಮೊದಲು ಮಾಡುವ ಕೆಲಸ ಅಲ್ಲಿ ಹೋಗಿ ತನ್ನ ತವರು ಮನೆಯಲ್ಲಿದ್ದ ಸುಖದ ಹುಡುಕಾಟ.ಕಳೆದುಕೊಂಡಿರುವುದಕ್ಕೆ ಯಾವಾಗಲೂ ಬೆಲೆ ಹೆಚ್ಚು.ಆದರೂ ಮನುಷ್ಯನಿಗೆ ತನ್ನ ಬಳಿ ಇರುವುದಕ್ಕಿಂತ ಇಲ್ಲದವುಗಳ ಮೇಲೆ ವಿಪರೀತ ಹುಚ್ಚು.
ಈ ಸಮಯದಲ್ಲಿ ಬಹುತೇಕವಾಗಿ ಅವಳಿಗೆ ಬರಿ ನಿರಾಸೆ ಕೋಪ ಅವಮಾನಗಳೆ ಬಹುಮಾನ. ಮೊದಲಿಗೆ ನಾವು ಬದುಕಲ್ಲಿ ಯಾವ ಜಾಗದಲ್ಲಿ ಏನು ಹುಡುಕಬೇಕು ಎಂದು ತಿಳಿಯಬೇಕು.ಮನುಷ್ಯನ ಮನಸ್ಸೆ ಹೀಗೆ, ಇರೋದು ಬೇಡ.ಬೇಕಾದ್ದು ಸಿಗಲ್ಲ.ಅಪ್ಪ ಅಮ್ಮನ ಆಸರೆಯಲ್ಲಿರುವಾಗ ಬದುಕು ಕನಸುಗಳ ಜೊತೆ ಸಾಗುತ್ತದೆ.ಜವಾಬ್ದಾರಿಗಳೆಲ್ಲ ಅವರ ಹೆಗಲ ಮೇಲಿರುತ್ತದೆ. ಕಷ್ಟಗಳ ಪರಿಚಯನೇ ಇರವುದಿಲ್ಲ. ಬದಲಾವಣೆ ಜಗದ ನಿಯಮ.ಬದುಕು ಕಷ್ಟವನ್ನೆ ಇರಲಿ ಸುಖವನ್ನೆ ಇರಲಿ ನಾವು ಅಂದುಕೊಳ್ಳದ ಸಮಯದಲ್ಲೆ ತಂದು ಸುರಿಯುವುದು.ಇದು ವಿಧಿಯ ನಿಯಮ. ವಿಧಿಯ ನಿಯಮವನ್ನು ಮೀರಿ ನಮ್ಮ ಬೇಕು ಬೇಡಗಳನ್ನು ಸಮಯಕ್ಕೆ ತಕ್ಕ ಹಾಗೆ ಪೂರೈಕೆ ಮಾಡುವವರು ಹೆತ್ತವರು ಮಾತ್ರ.ಇವೆಲ್ಲವುಗಳ ಪರಿಚಯ ನಮಗಾಗುವುದು ನಾವು ಬದುಕಿನ ಜವಬ್ದಾರಿ ಹೊತ್ತಾಗ ಮಾತ್ರ.
ಮದುವೆಯಾದ ಮೇಲೆ ಹೆಣ್ಣು ಕೇವಲ ಮಗಳಷ್ಟೆ ಅಲ್ಲ,ಅವಳ ಬದುಕಿನ ಪಾತ್ರಗಳು ಬದಲಾಗುತ್ತದೆ.ಅವಳು ಸೊಸೆ,ಮಡದಿ,ಅತ್ತಿಗೆ,ಒರಗಿತ್ತಿ,ಮೊದಲಾದ ಹೊಸ ಪಾತ್ರಗಳನ್ನು ಒಮ್ಮೆಗೆ ನಿಭಾಯಿಸುವ ಒತ್ತಡ ಅವಳ ಮೇಲಿರುತ್ತದೆ.ಇಲ್ಲಿ ಒಂದು ಪಾತ್ರವನ್ನು ನಿಭಾಯಿಸುವ ಹೊತ್ತಿಗೆ ಇನ್ನೊಂದು ಪಾತ್ರದ ಸಮತೋಲನ ತಪ್ಪಿರುತ್ತದೆ.
ಒಳ್ಳೆಯ ಮಡದಿಯಾಗ ಹೋದರೆ ಒಳ್ಳೆಯ ಸೊಸೆಯಾಗುವುದು ಕಷ್ಟ. ಒಳ್ಳೆಯ ಸೊಸೆಯಾಗ ಹೋದರೆ ಅತ್ತಿಗೆ ಯಾಗುವುದು ಕಷ್ಟ. ಇದರ ಜೊತೆಗೆ ಬದುಕನ್ನು ತಬ್ಬಿಕೊಂಡಿರುವ ತವರು ಮನೆಯ ಸಂಬಂಧ. ಇನ್ನೂ ಮನೆಯ ಜವಾಬ್ದಾರಿ,ಹೀಗೆ ಹತ್ತು ಹಲವಾರು ಸಮಸ್ಯೆಗಳು ಒಂದೇ ಬಾರಿಗೆ ಅವಳನ್ನು ದಾಳಿ ಮಾಡುತ್ತದೆ.ಬದುಕಿನ ಅನುಭವಗಳೆ ಇಲ್ಲದ ಹೆಣ್ಣು ಮಗಳಿಗೆ ಈ ಎಲ್ಲ ಜವಬ್ದಾರಿಗಳು ಒಮ್ಮೆಲೆ ಹೆಗಲೇರಿದಾಗ ಆ ಹೊರೆಯನ್ನು ಹೊರಲಾಗದೆ ಆ ಕ್ಷಣಕ್ಕೆ ಅವಳೊಮ್ಮೆ ಕುಗ್ಗಿ ಹೋಗುತ್ತಾಳೆ.ನಿರಾಸೆ ಕೋಪ ಮತ್ತು ದುಃಖ ಇವೆಲ್ಲವು ಅವಳನ್ನು ಆವರಿಸಬಹುದು.ಅಲ್ಲಿ ತಿಳಿದೊ ತಿಳಿಯದೆನೋ ತಪ್ಪುಗಳಾಗುತ್ತದೆ. ಆಗ ಕೆಲವರು ಅವಳನ್ನು ದಂಡಿಸಬಹುದು.ಇನ್ನೂ ಕೆಲವರು ಹಿಯ್ಯಾಳಿಸಬಹುದು,ಮತ್ತೂ ಕೆಲವರು ಅವಳ ತವರನ್ನು ದೂರಬಹುದು .ಹಾಗೆಯೇ ಇನ್ನೂ ಕೆಲವರು ಗಂಟುಮೂಟೆಯೊಂದಿಗೆ ಮತ್ತೆ ತವರಿಗಟ್ಟಬಹುದು.
ಆದರೆ ವಿಪರ್ಯಾಸವೇನು ಗೊತ್ತ? ಅಲ್ಲಿ ಅವಳ ಪರಿಸ್ಥಿತಿಯನ್ನು ದಾಟಿ ಬಂದ ಅತ್ತೆಯ ಪಾತ್ರದಾರಿ ಅವಳನ್ನು ಬಹುತೇಕವಾಗಿ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲ್ಲ.ಬದಲಾಗಿ ಅದು "ಸೊಸೆಯಾದವಳ ಕರ್ಮ" ಎಂಬಂತೆ ಉರಿಯುವ ಬೆಂಕಿಗೆ ತುಪ್ಪ ಸುರಿದು ಚಳಿ ಕಾಯಿಸುವ ಜಾಯಮಾನವನ್ನು ಹೊಂದಿರುವುದು.ತಾನು ಅನುಭವಿಸಿದ ಕಷ್ಟವನ್ನು ತನ್ನ ಸೊಸೆ ಅನುಭವಿಸಬಾರದು ಎಂಬ ಮನಸ್ಥಿತಿಯಿರುವ ಅತ್ತೆಯವರು ಕೆಲವರಾದರೆ,ಈಗ ನನಗೆ ಅತ್ತೆಯಾಗಿ ಅಧಿಕಾರ ಅವಕಾಶ ಎರಡೂ ಬಂದಿದೆ ಎಂಬ ಮನಸ್ಥಿತಿಯಿಂದ ದಬ್ಬಾಳಿಕೆ ಮಾಡಿ ಕೊಡಬಾರದ ಕಷ್ಟ ಕೊಡುವ ಅತ್ತೆಯವರು ಹಲವರಿದ್ದಾರೆ.ಇದಕ್ಕೆಲ್ಲ ಕಾರಣ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿ.ತಾನು ಸೊಸೆಗೆ ತಾಯಿಯಾದರೆ ಅವಳು ನನಗೆ ಮಗಳಾಗುವ ಬದಲು ನನ್ನ ಮಗನನ್ನು ನನ್ನಿಂದ ಕಿತ್ತುಕೊಂಡರೇ?........ನನ್ನ ಮೂಲೆಗುಂಪು ಮಾಡಿ ಹೊರಗಟ್ಟಿದರೆ?......ಹೀಗೆ ಆದರೆ,ಹೋದರೆ ಯೋಚನೆಗಳು ಅಲ್ಲಿ ಸಾಮರಸ್ಯದ ಸೂಚನೆಯನ್ನು ಕೊಡಲು ನಿರಾಕರಿಸುತ್ತದೆ.ಆಮೇಲೆ ಪ್ರತಿಯೊಂದು ವಿಚಾರಕ್ಕೂ ಮೊಸರಲ್ಲಿ ಕಲ್ಲು ಹುಡುಕುವ ಖಾಯಿಲೆ ಅಂಟಿಕೊಳ್ಳುತ್ತದೆ.ಆ ಮನೆಯಲ್ಲಿ ಅವಳನ್ನೇ ಹೋಲುವ ಹಣ್ಣು ಮಗಳಿದ್ದರೂ ಅವಳಿಗಿರುವ ನ್ಯಾಯ ಬೇರೆ."ಅವಳು ಮನೆಮಗಳು ,ಸೊಸೆಯಲ್ಲ "ಎಂಬುದನ್ನು ಮುಖಕ್ಕೆ ಹೊಡೆದಂತೆ ಸಾಭೀತು ಮಾಡುವ ಕುಟುಂಬಗಳಿಗೆ ಇಂದಿಗೂ ಕೊರತೆಯಿಲ್ಲ ಬಿಡಿ.
ಇವೆಲ್ಲವನ್ನು ಮೀರಿ ಯೋಚಿಸುವ ವಿಶಾಲ ಹೃದಯದ ಕುಟುಂಬಸ್ಥರು,ಅವಳ ಹೊರೆಗೆ ಹೆಗಲಾಗಿ ತವರಿನಂತೆ ತಂಪಾದ ಮಡಿಲಾಗಿ ಅವಳ ತಪ್ಪುಗಳನ್ನು ತಿಳಿಹೇಳಿ ಅವಳಿಗೆ ಸಂಸಾರವನ್ನು ಕಟ್ಟಿಕೊಡುತ್ತಾರೆ.ಕೆಲವೊಂದು ಬಾರಿ ಈ ಗುಂಪಿನ ಜನರು ಕೂಡ ಸೋಲುತ್ತಾರೆ.ಇಲ್ಲಿ ಆ ಮನೆಯವರು ಬಾಗುತ್ತಾರೆ ಎಂಬುದರ ಅರಿವಾಗಿ ಸೊಸೆಯೇ ಮಾರಿಯಾಗುತ್ತಾಳೆ.ಯಾಕೆಂದರೆ ಆ ಹೆಣ್ಣು ಮಗಳಿಗೆ ತಾನು ಅಂದುಕೊಂಡಿದ್ದೆ ನಡೆಯಬೇಕೆಂದು ಹಟಕ್ಕೆ ಬಿದ್ದು,ತಾನು ಯಾವುದೇ ಜವಾಬ್ದಾರಿಯನ್ನು ಹೊರದೆ ಸರ್ವಾಧಿಕಾರ ಬೇಕೆಂಬ ಪ್ರಬಲ ಮನೋಭಾವ ಹೊಂದಿರುತ್ತಾಳೆ .ಇಲ್ಲಿ ಕೂಡ ಸಂಸಾರ ಗೆಲ್ಲಲು ಸಾಧ್ಯವಿಲ್ಲ. ಇಲ್ಲಿ ಆ ಹೆಣ್ಣಿಗೆ ಎಲ್ಲವೂ ಇದೆ.ಆದರೆ ಅತಿಯಾಸೆಗೆ ಬಿದ್ದು ಅದನ್ನು ಸ್ವೀಕರಿಸುವ ಮನಸಿಲ್ಲ. ಕೆಲವೊಂದು ಸಂಸಾರದಲ್ಲಿ ಅತ್ತೆ ಸೊಸೆ ಹೊಂದಿಕೊಂಡಿದ್ದರು ಮನೆ ಮಗನಿಗೆ ಹಾಳು ಚಟಗಳು ಮನೆಯ ನೆಮ್ಮದಿಗೆಡಿಸುತ್ತದೆ.ಹಾಗದರೆ ಸಂಸಾರದ ಸಾರ ಕೇವಲ ಒಬ್ಬರ ಮೇಲೆ ಅವಲಂಬಿತವಾಗಿಲ್ಲ.ಒಂದು ಸಂಸಾರದ ಸಾಮರಸ್ಯ ಅಲ್ಲಿರುವ ಪ್ರತಿ ಕುಟುಂಬದ ಸದಸ್ಯರ ಜವಬ್ದಾರಿ .ಇಲ್ಲಿ ಪರಸ್ಪರ ಸಾಮರಸ್ಯ ಅತ್ಯಗತ್ಯ.
ಕೆಲವು ವರ್ಷಗಳ ಹಿಂದೆ ಇಲ್ಲಿ ಗಂಡನ ಮನೆ ಅಥವಾ ಹೆಣ್ಣು ಇಬ್ಬರಲ್ಲಿ ಯಾರು ಬಲಹೀನರೋ ಅವರು ಸೋತು ಕಷ್ಟಗಳ ಸರಮಾಲೆಯನ್ನು ತನ್ನ ಜೀವನದುದ್ದಕ್ಕೂ ಕೊರಳಿಗೆ ಮಾಲೆಯಾಗಿ ತೊಟ್ಟು ನಂತರ ಕೊನೆಗೆ ಅದನ್ನೇ ಕುಣಿಕೆಯನ್ನಾಗಿಸಿ ಬದುಕು ಮುಗಿಸಿದ ಅದೆಷ್ಟೋ ನಿದರ್ಶನಗಳಿವೆ.ಆದರೆ ಇವೆಲ್ಲವುಗಳನ್ನು ದಾಟಿ ಸೊಸೆಯ ಪಾತ್ರವನ್ನು ನರಳುತ್ತ ನಿರ್ವಹಿಸಿದ ಹೆಣ್ಣು ಮತ್ತೆ ತಾನು ಅತ್ತೆಯಾದಾಗ ತನ್ನ ಸೊಸೆಗೆ ಮತ್ತದೇ ಪರಿಸ್ಥಿತಿಯನ್ನು ತಂದಿಡುತ್ತಾಳೆ ಅಂದರೆ ಆಕೆಗೆ ಕೇವಲ ವಯಸ್ಸಾಗಿದೆ.ಕಷ್ಟಗಳೊಡನೆ ಬೆಂದರೂ ಆಕೆಯ ಬದುಕು ಇನ್ನೂ ಪಕ್ವವಾಗಿಲ್ಲ ಅನ್ನೋದು ಅಲ್ಲಿ ಸ್ಪಷ್ಟವಾಗುತ್ತದೆ.ಈ ಅತ್ತೆ ಸೊಸೆ ಮನಸ್ತಾಪಗಳು ಜಗದ ಸಾರ್ವತ್ರಿಕ ಸಮಸ್ಯೆ.ಇದು ಯಾವುದೋ ಒಂದು ಗುಂಪು ಪಂಗಡಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ.ಇದು ಹಿಂದಿನಿಂದಲೆ ನಡೆದುಕೊಂಡು ಬಂದಿರುವ ಒಂದೈ ಸಂಪ್ರದಾಯದಂತೆ ಈ ಸಮಾಜದಲ್ಲಿ ಇಂದೂ ಕೂಡ ಆಳವಾಗಿ ಬೇರು ಬಿಟ್ಟಿದೆ.
ಇಂದು ಹೆಣ್ಣು ಮಕ್ಕಳ ಬದುಕು ಬದಲಾಗಿದೆ.ವಿಧ್ಯಾವಂತರು,ಆರ್ಥಿಕವಾಗಿ ಸ್ವತಂತ್ರರು.ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ.ಎಲ್ಲ ಕ್ಷೇತ್ರದಲ್ಲಿ ಬಲಶಾಲಿಯಾಗಿರುವ ಹೆಣ್ಣು ತನ್ನ ಸಂಸಾರವನ್ನು ಜೀವನಪೂರ್ತಿ ಉಳಿಸಿಕೊಳ್ಳಲು ವಿಫಲವಾಗುತಿರುವುದು ವಿಪರ್ಯಾಸವೇ ಸರಿ.ಇಲ್ಲಿ ಕೂಡ ಮನೆ ಒಳಗೂ ಹೊರಗೂ ದುಡಿಯುವ ಹೆಣ್ಣು ಮಕ್ಕಳು ಬಯಸುವುದು ಹಿಡಿ ಪ್ರೀತಿ ಹಾಗೂ ಸ್ವಲ್ಪ ಸಹಾಯ. ಕೆಲವು ಮನೆಗಳಲ್ಲಿ ಇಂದು ಕೂಡ ಈ ಸಹಾಯ ಪ್ರೀತಿ,ಹಾಗೂ ಸ್ನೇಹಪರ ವಾತವರಣಕ್ಕೆ ಬಹಳ ಕೊರತೆಯಿರುತ್ತದೆ.
ಹೆಣ್ಣು ಅದೆಷ್ಟೆ ಸ್ವತಂತ್ರಳಾದರೂ ಅವಳು ಯಾವಾಗಲೂ ಸಂಬಂಧಗಳಲ್ಲಿ ಪ್ರೀತಿ ಹುಡುಕುವುದನ್ನು ಬಿಡಲಾರಳು.ಇದು ಖಂಡಿತ ಅವಳ ಬಲಹೀನತೆಯಲ್ಲ. ಪ್ರಾಕೃತಿಕವಾಗಿ ಅವಳಿಗೆ ಸಿಕ್ಕ ಕೊಡುಗೆ. ಆದರೂ
ಇಂದಿನ ವೈವಾಹಿಕ ಬದುಕು ಮೊದಲಿನ ಹಾಗಿಲ್ಲ.ಬಂಧಗಳ ಇಚ್ಛೆ. ಮುಗಿದಾಗ ವಿಚ್ಛೇದನ ಪತ್ರದ ಮೇಲೆ ಸಹಿ ಮಾಡಿದರೆ ಅಗ್ನಿಸಾಕ್ಷಿಯಾಗಿ ಬೆಸೆದ ಬಂಧ, ಊರಿಗೆಲ್ಲ ಲಕ್ಷ ಲಕ್ಷ ಸುರಿದು ಭರ್ಜರಿಯಾಗಿ ಮಾಡಿದ ಮದುವೆ ಮುರಿದು ಬೀಳುತ್ತದೆ.ಈಗ ಕೌಟುಂಬಿಕ ಕಲಹದಲ್ಲಿ ಅತ್ತೆ ಸೊಸೆಯ ಪಾತ್ರವು ಮಹತ್ವ ಕಳೆದುಕೊಂಡಿದೆ. ಆದರೂ ಇಂದಿನ ಜಗದಲ್ಲಿ ಸಾರ ಕಳೆದುಕೊಳ್ಳುತಿರುವ ಸಂಸಾರಗಳ ಸಂಖ್ಯೆ ಇನ್ನೂ ಹೆಚ್ಚಾಗುತಿದೆ.
ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ ಮಾನವನ ಜೀವನಶೈಲಿ ಯಾಂತ್ರಿಕವಾಗಿದೆ.ಇಲ್ಲಿ ಯಾರು ಕಷ್ಟ ಪಡಲು ತಯಾರಿಲ್ಲ.ತಮ್ಮ ಆರಾಮವಲಯದ ಗಡಿ ದಾಟಿದ ಯಾವುದೇ ಸಂಬಂಧವನ್ನಾದರೂ ಬಹಳ ಸುಲಭವಾಗಿ ಕಿತ್ತುಹಾಕುತಿದ್ದಾರೆ.ಭಾವನಾತ್ಮಕವಾಗಿ ಯಾರು ಯಾರನ್ನು ಹಚ್ಚಿಕೊಳ್ಳುತಿಲ್ಲ.ಬದುಕು ಬಹಳ ಯಾಂತ್ರಿಕವಾಗಿದೆ.ಶಿಕ್ಷಣ ವ್ಯವಸ್ಥೆಯು ಕೇವಲ ಪದವಿಗೆ ಸೀಮಿತವಾಗಿದೆ. ಬದುಕಿನಲ್ಲಿ ಉಪಯೋಗಕ್ಕೆ ಬಾರದ ಪಠ್ಯ ವಿಷಯಗಳನ್ನು ಕಂಠಪಾಠ ಮಾಡುತ್ತ ಪದವಿ ಗಳಿಸುವ ಭರದಲ್ಲಿ ಬದುಕಿನ ಪಾಠಗಳನ್ನು ಕಲಿಯಲು ಸಮಯ ಸಾಲದಾಗಿದೆ.ಗಣಿತದ
ಸಮೀಕರಣವನ್ನು ಸುಲಭವಾಗಿ ಬಿಡಿಸುವ ನಮಗೆ ಸಂಬಂಧಗಳ ಸಮಸ್ಯೆಗಳನ್ನು ಬಗೆಹರಿಸಲು ತಾಳ್ಮೆ ಸಾಲುತಿಲ್ಲ.ಇತಿಹಾಸದ ಪುಟದಲ್ಲಿನ ಕಾಲಘಟ್ಟವನ್ನು ಸಲಿಸಾಗಿ ಹೊಂದಿಸಿ ಬರೆಯುವ ನಮಗೆ ನಮ್ಮವರ ಭಾವನೆಗಳನ್ನು ನಮ್ಮೊಂದಿಗೆ ಹೊಂದಿಸಿಕೊಳ್ಳಲು ಕಷ್ಟವಾಗುತಿದೆ ಎಂದರೆ ವಿಪರ್ಯಾಸವಲ್ಲವೇ?
ಹಾಗಾದರೆ ಸಂಸಾರವೆಂದರೆ ಕೇವಲ ಹೆಣ್ಣಿನ ಮೇಲೆ ಅವಲಂಬಿತವಾಗಿಲ್ಲ.ಇಲ್ಲಿ ಪ್ರತಿಯೊಬ್ಬರ ಪಾತ್ರವು ಬಹಳ ಮುಖ್ಯ. ಒಂದು ಕುಟುಂಬದ ಮನೆಸ್ಥಿತಿಯು ಆರೋಗ್ಯಕರವಾಗಿರಬೇಕೆಂದರೆ ಅಲ್ಲಿರುವ ಪ್ರತಿಯೊಬ್ಬನ ಮನಸ್ಥಿತಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಒಬ್ಬನ ಮನಸಿನ ಅನಾರೋಗ್ಯವು ಇಡಿ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುವುದು. ಇಲ್ಲಿ ಕೇವಲ ಹೆಣ್ಣು ಮಾತ್ರ ಅಲ್ಲ ಇಂದಿನ ಜನಾಂಗ ಭಾವನಾತ್ಮಕವಾಗಿ ಬದಲಾಗಬೇಕಿದೆ.
ಇಂದು ಜಗದಲ್ಲಿ ಬ್ರೇಕಪ್ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟ ಪಟ್ಟು ಮಾಡಿಕೊಂಡ ಅದೆಷ್ಟೋ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದೆ.ಇದು ಕೇವಲ ಹೊಂದಾಣಿಕೆಯ ಸಮಸ್ಯೆಯಲ್ಲ. ಇದಕ್ಕೆ ಕಾರಣ ಸಾಮಾಜಿಕ ಬದಲಾವಣೆ ಕೂಡ.ಎಲ್ಲರ ಮನಸುಗಳು ಜಂಜಾಟಗಳ ನಡುವೆ ಜಟಿಲಗೊಂಡಾಗ ಸಂಬಂಧಗಳು ಶಿಥಿಲಗೊಳ್ಳುತ್ತದೆ.ಇವೆಲ್ಲವುಗಳನ್ನು ನೋಡಿ ಬೆಸೆತ್ತ ಇಂದಿನ ಕೆಲವು ಹೆಣ್ಣುಮಕ್ಕಳಿಗೆ ಮದುವೆಯ ಸಹವಾಸವೇ ಬೇಡ ಎನ್ನುವಂತಹ ಮನಸ್ಥಿತಿ ಬಂದಿದೆ.
ಜಗದ ಶಬ್ದಕೋಶದಿಂದ ಸಹನೆ ತಾಳ್ಮೆ,ಶಿಸ್ತು ,ಭಾವನೆಗಳು ದಿನಗಳೆದಂತೆ ಮಾಯವಾಗುತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಸಂಸಾರ ಎಂಬ ಪದ ಕೂಡ ಸಮಾಜದಲ್ಲಿ ಸಂಹಾರ ಆಗೋ ತರಹ ಕಾಣುತ್ತಿದೆ. ಸಮಾಜದಲ್ಲಿ ಮೂಢನಂಬಿಕೆಗಳು ತೊಲಗಬೇಕೆ ಹೊರತು ಮನುಷ್ಯನ ನಡುವಿನ ನಂಬಿಕೆಗಳಲ್ಲ.ಇದನ್ನ ಇಂದಿನ ಸಮಾಜಕ್ಕೆ ಅರ್ಥೈಸುವುದು ಬಹಳ ಮುಖ್ಯ.ಯಾವುದೇ ಟ್ರೆಂಡ್ನ ಹಿಂದೆ ಬಿದ್ದು ನಮ್ಮತನವನ್ನು ಕಳೆದುಕೊಳ್ಳುವ ಮುನ್ನ ತುಸು ಯೋಚಿಸಿ ಹೆಜ್ಜೆಯಿಡುವ ಕಾರ್ಯ ಕೈಗೊಳ್ಳುವುದು ಈಗ ಅನಿವಾರ್ಯ.ಇಲ್ಲಿ ಬದಲಾಗಬೇಕಿರುವುದು ಅಥವಾ ಬದಲಾಗುತಿರುವುದು ಕಾಲ ಅಲ್ಲ.ಸಮಾಜ ಅರ್ಥಾತ್ ನಾವೆಲ್ಲರು. ಸಂಸಾರ ಪರಿಪೂರ್ಣವಾಗಬೇಕಾದರೆ ಅಲ್ಲಿ ಎಲ್ಲರ ಪಾತ್ರಗಳ ಅಚ್ಚುಕಟ್ಟಾದ ನಿರ್ವಹಣೆಯು ಮುಖ್ಯವಾಗುತ್ತದೆ.ಹೊಂದಾಣಿಕೆ ಕೇವಲ ಒಬ್ಬ ಹೆಣ್ಣಿಗೆ ಮಾತ್ರ ಸೀಮಿತವಾದದ್ದಲ್ಲ. ಪ್ರತಿಯೊಬ್ಬ ಸದಸ್ಯನೂ ಮೊದಲು ಕುಟುಂಬದಲ್ಲಿ ತನ್ನ ಪಾತ್ರವೇನು ಎಂಬುದನ್ನು ತಿಳಿದು ನಡೆದರೆ ಸಂಸಾರ ಸುಖಮಯವಾಗಬಹುದು.
PNRai



Comments
Post a Comment