ಕನಸು ಮನಸಿನ ನಡುವಿನ ಶೀತಲ ಸಮರಗಳು...
ಬದುಕ ನಿಶೆಯೊಳಗಿನಿಂದ.......
ಕನಸು ಮನಸಿನ ನಡುವಿನ ಶೀತಲ ಸಮರಗಳು
ಮನುಷ್ಯನ ಬದುಕು,ಏರಿಳಿತಗಳ ದಾರಿಯಲ್ಲಿ ಸಾಗುವ ಒಂದು ಪಯಣ.ಅಲ್ಲಲ್ಲಿ ಕಾಣಸಿಗುವ ಅಪರಿಚಿತ ಕೆಲವು ಸಂಗತಿಗಳಿಬಹುದು,ವಿಚಿತ್ರ ಅನುಭವಗಳು, ನೋವು, ದುಃಖ, ನಲಿವು ಗೆಲುವು,ಹೀಗೆಯೇ ಹತ್ತು ಹಲವು
ಏರಿಳಿತಗಳ ನಡುವೆ ಸಾಗುವ ಬದುಕಿನ ಪಯಣದಲ್ಲಿ ಶೀತಲ ಸಮರಗಳು ಸಮರಗಳು ಸರ್ವೆ ಸಾಮಾನ್ಯ.ಇದು ಎರಡು ವ್ಯಕ್ತಿಗಳ ಮಧ್ಯೆಯೂ ಇರಬಹುದು.ಅಥವಾ ಒಂದು ವ್ಯಕ್ತಿ ಮತ್ತು ಅವನ ವ್ಯಕ್ತಿತ್ವದ ನಡುವೆಯೂ ಇರಬಹುದು.ಬದುಕು ಹಲವಾರು ಏರಿಳಿತಗಳೊಂದಿಗೆ ಸಾಗುವಾಗ ಬದುಕಿನ ಸಮತೋಲನದಲ್ಲಿ ಏರುಪೇರಾಗಿ ಮನಸಿನ ಸಾಮರಸ್ಯಕ್ಕೆ ಕೊರತೆಯಾಗುತ್ತದೆ.ನಿಜವೇನೆಂದರೆ ಎಲ್ಲರ ಬದುಕು ಹೀಗೆಯೇ.ಆದರೆ ಇದು ಹೊರ ಪ್ರಪಂಚದ ಬೆಳಕಿಗೆ ಕಾಣದೆ ಪ್ರತಿ ಮನುಷ್ಯನ ಮನದೊಳಗೆ ರಹಸ್ಯವಾಗಿರುತ್ತದೆ.
ಈ ಜಗತ್ತಲ್ಲಿ ಪ್ರತಿಯೊಬ್ಬ ಮನುಷ್ಯನು ಹಲವಾರು ಬಿಚ್ಚಿಡಲಾಗದಂತಹ ರಹಸ್ಯಗಳನ್ನು ಮನದ ಕತ್ತಲೆಯ ಕೋಣೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ.ಇದಕ್ಕೆ ಕಾರಣ ಹಲವಾರು ಪರಿಸ್ಥಿತಿಗಳಾದರೂ ಪರಿಣಾಮ ಮಾತ್ರ ಅವನ ಬದುಕಿನ ನೆಮ್ಮದಿಯ ಮೇಲೆ ಬೀರುತ್ತದೆ.ಈ ಕಳೆದುಕೊಂಡ ನೆಮ್ಮದಿಯ ಭರ್ತಿ ಮಾಡುವ ಸಾಧನ "ನಮ್ಮನ್ನು ನಾವು ಮಾಡಿಕೊಳ್ಳುವ ಸಮಾಧಾನ" ಮಾತ್ರ.
ನಮ್ಮ ಜನ ಹೇಗಂದ್ರೆ ,ಅವರಿಗೆ ಅವರ ಬದುಕಿನ ನೋವು ಸಮಸ್ಯೆಗಳಿಗಿಂತ ಇತರರ ಬದುಕಿನ ಆಗುಹೋಗುಗಳ ಬಗ್ಗೆಯೇ ಹೆಚ್ಟು ಕುತೂಹಲ.ಅನ್ಯರ ಬಗ್ಗೆ ಸಣ್ಣ ಸುದ್ದಿ ಸಿಕ್ಕರೆ ಸಾಕು,ಅವರನ್ನು ಕೊರೆದು ತಿವಿದು ಜೀವ ಜೀವನವನ್ನೆ ಹಿಂಡಿ ಹಿಪ್ಪೆ ಮಾಡುತ್ತಾರೆ.ಆದರೆ ತಮ್ಮ ವಿಚಾರಗಳು ಮಾತ್ರ ಗುಪ್ತವಾಗಿರಬೇಕೆಂದು ಬಯಸುತ್ತಾರೆ.ಬೇರೆಯವರ ತಪ್ಪುಗಳನ್ನು ಸರಾಗವಾಗಿ ಎತ್ತಿಡುವ ಜನರು ತಮ್ಮ ಕಡೆಯಿಂದ ತಪ್ಪಾದಾಗ ಅದನ್ನು ಮುಚ್ಚಿ ಹಾಕುವುದಕ್ಕೆ ಹರಸಾಹಸ ಮಾಡುತಿರುತ್ತಾರೆ.
ಬದುಕಿನಲ್ಲಿ ತಪ್ಪುಗಳಾದಾಗ ಇತರರ ಮುಂದೆ ಸಮರ್ಥಿಸಿಕೊಳ್ಳುವ ಬದಲು ನಮ್ಮನ್ನು ನಾವು ಪ್ರಶ್ನಿಸಿಕೊಂಡು ಸರಿ ತಪ್ಪುಗಳ ಫಲಿತಾಂಶ ಹುಡುಕುವುದು ಉತ್ತಮವೆನಿಸುತ್ತದೆ.ಮನಸಾಕ್ಷಿಯ ತೀರ್ಪು ಈ ಜಗದಲ್ಲಿ ಅತ್ಯಂತ ಪಾರದರ್ಶಕವಾದ ತೀರ್ಪು.ಮನಸು ಮತ್ತು ಬುದ್ಧಿಯ ವಾದ ವಿವಾದಗಳನ್ನು ಪರಿಶೀಲಿಸಿ ಮನಸಾಕ್ಷಿ ತೀರ್ಪು ಕೊಡುವ ಸಮಯದಲ್ಲಿ ಮನಸಿನಲ್ಲಿ ಅದೆಷ್ಟೊ ಶೀತಲ ಸಮರಗಳು ಉಂಟಾಗುತ್ತದೆ. ಈ ಸಮರದ ಸಮಯದಲ್ಲಿ ಸಾಯುವವುಗಳು,ಕನಸು ,ಬಯಕೆ,ಅಹಂಕಾರ,ಕೋಪ,ಖುಷಿ,ದುಃಖ ಹೀಗೆ ಮನದಲ್ಲಿನ ಹಲವಾರು ಭಾವಗಳು.
ಬದುಕು ನಾವಂದುಕೊಂಡಂತೆ ನಡೆಯದಿದ್ದರೂ ಬಾಳಬನದಲ್ಲಿ ಅರಳುವ ಕನಸಿನ ಹೂವುಗಳಿಗೇನು ಕೊರತೆಯಿಲ್ಲ.ಕನಸುಗಳು ಯಾರಿಗಿಲ್ಲ ಹೇಳಿ? ಕ್ಷಣ ಕ್ಷಣಕ್ಕೂ ನಮ್ಮ ನಾಳೆಗಳು ಹಾಗಿರಬೇಕು ಹೀಗಿರಬೇಕು ಎಂಬ ಬಯಕೆಯ ಮೊಗ್ಗುಗಳು ಸದಾ ಮನದಲ್ಲಿ ಚಿಗುರುತ್ತಲೆ ಇರುತ್ತದೆ.ಈ ಕನಸುಗಳು ಬದುಕಿನ ಭರವಸೆಗಳು ಕೂಡ. ಅದಕ್ಕೆ ನೀರೆರೆದು ಪೋಷಿಸಿ ಫಲಭರಿತ ಫಸಲು ಕೊಡುವಂತೆ ಮಾಡುವುದು ಪ್ರಯತ್ನ ಹಾಗೂ ಪರಿಶ್ರಮ.
ಕನಸೆಂಬ ಮಾಯಲೋಕ ಬದುಕಿನಲ್ಲಿ ಇಲ್ಲವೆಂದರೆ ಬದುಕು ಸಪ್ಪೆ.ಕನಸೆಂದರೆ ಬದುಕನ್ನು ಸೆಳೆಯುವ ಅಪರೂಪದ ಅಪ್ಸರೆಯಿದ್ದಂತೆ.ಈ ಕನಸೆಂಬ ಅಪ್ಸರೆಯ ಕೈ ಹಿಡಿಯಲು ಇಚ್ಚಿಸುವವನು ಬದುಕಿನ ಕುಲುಮೆಯಲ್ಲಿ ಬೇಯಲು ಸಿದ್ದವಿರಬೇಕು. ಹಾಗೆಯೇ ಸಾವಿರ ಸಮರದ ಸೋಲನ್ನು ತಡೆಯುವ ಬಲವಂತನಾಗಿರಬೇಕು.ಎಲ್ಲ ಅಡೆತಡೆಗಳನ್ನು ಮೀರಿ ಗೆಲುವಿಗೆ ಬಲೆ ಬೀಸುವ ಚಾಣಕ್ಯ ಹಾಗೂ ಅವಿರತ ಪರಿಶ್ರಮಿಯಾಗಿರಬೇಕು.
ಬಾಳ ಬನದಲ್ಲಿ ಅದೆಷ್ಟೋ ಕನಸುಗಳ ಮೊಗ್ಗುಗಳು ಚಿಗುರು ಬಿಡುತಿರುತ್ತದೆ.ಇಲ್ಲಿ ಅರಳಿ ಕಾಯಾಗೋ ಹೂವುಗಳಿಂತ ಬಾಡಿ ನರಳೊ ಕನಸ ಹೂವುಗಳೇ ಹೆಚ್ಚು. ಹುಚ್ಚು ಮನಕ್ಕೇನು?ಕನಸೆಂಬ ಮರಿಚಿಕೆಗಳ ಹಿಂದೆ ಅಲೆದಲೆದು ಕೊನೆಗೆ ಸಿಗದಾಗ ಕೊರಗಿ ಮರುಗಿ ಜೀವ ಹಿಂಡುವುದೇ ಇದರ ಕೆಲಸ.ಅದೆಷ್ಟು ಬಾರಿ ಕೈ ಸುಟ್ಟುಕೊಂಡರೂ ಕನಸಿನ ಹಿಂದೆ ಸುತ್ತುವ ಚಾಳಿಯ ಬಿಡದೀ ಮನಸು.
ಈ ಜಗದಲ್ಲಿ ಮನಸಿಗೆ ಕನಸುಗಳ ಮೇಲೆ ಒಲವಾಗಿದೆಯಂತೆ.ಇವರಿಬ್ಬರ ಒಲವಿನಾಟದಲ್ಲಿ ಪೇಚಾಟಕ್ಕೆ ಸಿಕ್ಕಿಹಾಕಿಕೊಂಡಿರುವುದು ಬದುಕೆಂಬ ಬಡಪಾಯಿ.ಅತ್ತ ಸಮಯದ ಚಾಟಿಯೇಟು.ಇತ್ತ ಕನಸು ಮನಸಿನ ನಿಲ್ಲದ ಓಟ.ಪಾಪ ಸಾಕಾಗಿದೆ ಬದುಕಿಗೆ ಈ ಜಂಜಾಟ. ಒಂದು ಕಡೆಗೆ ಕಂಡದೆಲ್ಲ ಬಯಸುವ ಮನಸು.ಇನ್ನೊಂದೆಡೆ ಬವಣೆಯೊಡನೆ ಸೆಣಸಾಡುವ ಬದುಕು. ಮತ್ತೊಂಡೆದೆ ಮುಗಿಯುತಿರುವ ಆಯಸ್ಸು,ಇವೆಲ್ಲವನ್ನು ಸಮತೂಗಿಸಿ ಬದುಕಿನ ಬಂಡಿಯನ್ನು ಮುನ್ನಡೆಸುವಷ್ಟರಲ್ಲಿ ಸಾಕು ಸಾಕಾಗುತ್ತೆ.
ಇಷ್ಟಾದರೆ ಮುಗಿಯಿತೆ?ಸಂಸಾರಿಯಾದವನ ಮನದ ಗೋಳು ಯಾರಿಗೂ ಬೇಡ.ತನ್ನ ಸಂಸಾರದವರ ಆಸೆ ಕನಸುಗಳ ಪೂರೈಸುವಷ್ಟರಲ್ಲಿ ತನ್ನ ಕನಸುಗಳು, ಆಸೆಗಳು, ಮನದ ಕಸದ ಡಬ್ಬಿಯಲ್ಲಿರುತ್ತದೆ.
ಕನಸೊಂದು ಮಾಯಜಿಂಕೆ. ಹಾಗೂ ಕನಸು ಒಂದು ಭರವಸೆಯೂ ಕೂಡ.ಕನಸು ಕಾಣುವ ಮನಸು ನಮ್ಮ ಹಿಡಿತದಲ್ಲಿರಬೇಕು.ಅಂಕೆ ಮೀರಿ ಕಾಣುವ ಕನಸುಗಳು ಕೇವಲ ಕಾಲಹರಣವಷ್ಟೆ.
ಒಂದು ಬಾರಿ ಕನಸ ಹಿಂದೆ ಅಲೆದು ಮೋಸ ಹೋದ ಮನಸಿಗೆ ಬುದ್ಧಿ ಬಾರದೆ?ಅದೆಷ್ಟು ಬಾರಿ ಎಡವಿದರೂ ಬುದ್ದಿ ಕಲಿಯದೆ ಕನಸೆಂಬ ಮದಿರೆಗೆ ದಾಸನಾಗುತ್ತದೆ.ಬರಿಯ ಕನಸು ಕೇವಲ ಮನಸನ್ನು ಆವರಿಸುವ ಒಂದು ಅಮಲಷ್ಟೆ.ಈ ನಶೆ ಕೇವಲ ಮನಸ್ಸು ಭ್ರಮೆಯ ಲೋಕದಲ್ಲಿರುವವರೆಗೆ ಮಾತ್ರ.ವಾಸ್ತವದ ಚಿತ್ರಣ ಇಲ್ಲಿ ಬೇರೆಯೇ ಇರುತ್ತದೆ. ಕಲ್ಪನೆಯ ಕನಸುಗಳು ವಾಸ್ತವದಲ್ಲಿ ನನಸಾಗಬೇಕಾದರೆ ಆ ವ್ಯಕ್ತಿಯು ಅವಿರತ ಪರಿಶ್ರಮದ ಜೊತೆ ಹಲವು ತ್ಯಾಗಗಳಿಗೆ ತಯಾರಾಗಿರಬೇಕು.
ಬದುಕು ಸಮಸ್ಯೆಗಳ ಬಲೆ.ಈ ಸಮಸ್ಯೆಗಳನ್ನು ಬಿಡಿಸುವುದು ಒಂದು ಕಲೆ.ಜಾಣತನದಿಂದ ಬದುಕ ಒಗಟನ್ನು ಬಿಡಿಸುವವನಿಗೆ ಬದುಕು ಆಸಕ್ತಿದಾಯಕವಾಗಿ ಕಾಣುತ್ತದೆ .ಚಿಂತೆಗಳ ಕಂತೆಯೆಣಿಸಿ ಸಮಸ್ಯೆಗಳನ್ನು ರಾಶಿ ಹಾಕಿಕೊಂಡು ಗೋಳಾಡಿದರೆ ಚಿಂತೆಗಳ ಕಂತೆಗಳು ಚಿತೆಗೆ ದಾರಿ ತೋರಿಸುವುದು.ಸಮಸ್ಯೆಗಳು ಬಂದಾಗ ಚಿಂತೆ ಮಾಡುವುದು ಕಾಲಹರಣ ಹೊರತು ಪರಿಹಾರ ಕೊಡದು. ಹಾಗೆಯೇ ಕೇವಲ ಕನಸು ಕಾಣುವ ಕಾಯಕ ಕಾಲಹರಣ ಹೊರತು ಯಾವುದೇ ಫಲಗಳನ್ನು ಕೊಡದು.
ಪ್ರಯತ್ನ ಮತ್ತು ಪರಿಶ್ರಮವೇ ಸಫಲತೆಗೆ ಸಹಕಾರಿಯಾಗುವ ಸಾಧನಗಳು.
ಸಮಯವನ್ನು ಸಾಲ ಪಡೆಯುವ ಕನಸುಗಳಿಗೆ ಅವುಗಳನ್ನು ತಿರುಗಿ ನೀಡುವ ಚಿಂತೆಯಿರುವುದಿಲ್ಲ.ಆ ಕನಸುಗಳು ನನಸಾಗಿ ಬದುಕಾದರೆ ಮಾತ್ರ ವ್ಯಯಿಸಿದ ಸಮಯಕ್ಕೊಂದು ಮೌಲ್ಯ. ಇಲ್ಲವಾದರೆ ಕಾಲಹರಣವಾಗಿ ಈ ನಷ್ಟದ ಹೊರೆಯನ್ನು ಬದುಕಿಡಿ ಹೊತ್ತು ತಿರುಗುವ ಕಾಯಕ ನಮ್ಮದಾಗುತ್ತದೆ.ಸಮಯವು ಉರಿಯುವ ಮೇಣದಂತೆ.ನಮ್ಮ ಪ್ರಯತ್ನಗಳನ್ನು ಚಂದಗಾಣಿಸಿ ಬದುಕಿಡಿ ಬೆಳಗುವಂತೆ ಮಾಡುವ ಜವಾಬ್ದಾರಿ ನಮ್ಮದೆ. ನಮ್ಮ ಕನಸುಗಳು ಭವಿಷ್ಯವಾಗಬೇಕಾದರೆ ವರ್ತಮಾನವನ್ನು ವ್ಯರ್ಥ ಮಾಡದೆ ಬದುಕಬೇಕು. ನಾವು ಯಾವುದೇ ಕೆಲಸವನ್ನು ಮಾಡಿದಾಗ ಇತರರು ಮೆಚ್ಚದಿದ್ದರೂ ನಮ್ಮ ಮನಸ್ಸಾಕ್ಷಿ ಮೆಚ್ಚುವಂತಿರಬೇಕು.ವೆಚ್ಚ ಮಾಡಿದ ಸಮಯ ಸಾರ್ಥಕವೆನಿಸುವಂತಿರಬೇಕು.
ಕನಸುಗಳು ಹೇಗಿರಬೇಕೆಂದರೆ ಕೆಲಸ ಮಾಡಿದ ದಣಿವನ್ನು ಮರೆಸುವಂತಿರಬೇಕು. ಕನಸು ನನಸಾಗುವವರೆಗೆ ಕಾಯುತ ಸಹನೆಯಿಂದ ಕೆಲಸ ಮಾಡುವ ಪ್ರೇರಣೆ ನೀಡುವಂತಿರಬೇಕು.ಇದು ಬದುಕನ್ನು ಚಂದಗಾಣಿಸುವ ಕನಸುಗಳಾಗುತ್ತದೆ.ಇಲ್ಲವಾದಲ್ಲಿ ಬರಿ ಭ್ರಮೆಯ ಲೋಕದಲ್ಲಿರುವ ಕೈಗೆಟುಕದ ಮಾಯಜಿಂಕೆಯಾಗಿ ಬದುಕಿನ ಕಾಲಹರಣ ಮಾಡುವ ಆಟಿಕೆಯಾಗುತ್ತದೆ.
ಕನಸಿನ ಹಿಂದೆ ಅಲೆದು ಗೆದ್ದವನು ಇದ್ದಾನೆ. ಸೋತವನು ಇದ್ದಾನೆ.ಕನಸನ್ನು ಹಿಂಬಾಲಿಸುವ ಕರ್ಮಯೋಗಿ ಕನಸನ್ನು ಕರ್ಮವಾಗಿಸಿ ನನಸು ಮಾಡಲು ಹೋರಾಡುತ್ತಾನೆ.ಆದರೆ ಕನಸುಗಳ ಸುಮ್ಮನೆ ಹಿಂಬಾಲಿಸುತ್ತ ಮಜ ಮಾಡುವವನು ಕೇವಲ ಭ್ರಮೆಯಲ್ಲಿ ಬದುಕಿ ಬದುಕನ್ನು ಶಪಿಸುವನು.ನಮ್ಮ ಬದುಕಿನ ಪ್ರತಿ ಕನಸುಗಳು ಆಲೋಚನೆಗಳಾಗಬೇಕು.ಆ ಯೋಚನೆಗಳು ಯೋಜನೆಗಳಾಗಬೇಕು.ಯೋಜನೆಗಳು ಕಾರ್ಯರೂಪಕ್ಕೆ ಬಂದಾಗಲೇ ಕನಸುಗಳು ನನಸಾಗುವ ದಾರಿ ಸಿಗುವುದು.ಮತ್ತೆ ಸಾಗುವ ದಾರಿಯಲ್ಲಿ ಹಲವು ಕಷ್ಟಗಳು ಬರುವುದು.ಇವೆಲ್ಲವುಗಳನ್ನು ದಾಟಿ ತನ್ನ ಕನಸನ್ನು ನನಸು ಮಾಡಿಕೊಳ್ಳುವವನೆ ನಿಜವಾದ ಕನಸುಗಾರ.
ಪ್ರತಿಯೊಬ್ಬ ಸಾಧಕನ ಸಾಧನೆಯ ಹಿಂದೆ ಸಾವಿರ ಬವಣೆಗಳಿರುತ್ತದೆ.ಅದೆಷ್ಟೋ ನೋವು ಅವಮಾನಗಳಿರುತ್ತದೆ.ಅವೆಲ್ಲವುಗಳ ದಾಟಿ ಗುರಿಯೆಂಬ ಗೆರೆ ಮುಟ್ಟಿದವನೆ ಸಾಧಕ.
ಕೆಲವೊಮ್ಮೆ ಗೆಲುವು ಅದೃಷ್ಟದಿಂದಲೂ ಬರುತ್ತದೆ.ಆದರೆ ಈ ಅದೃಷ್ಟ ಅನ್ನೊದು ಮಿಂಚು ಇದ್ದ ಹಾಗೆ,ಒಂದು ಕ್ಷಣಕ್ಕೆ ಮಿಂಚಿ ಮರೆಯಾಗುವಂತ ಬೆಳಕಿನಂತೆ ಗೆಲುವು ಕೂಡ ಮಿಂಚಿ ಮರೆಯಾಗುವುದು.ಬದುಕಿನ ಕುಲುಮೆಯಲಿ ಬೆಂದು ಬೆಂಡಾಗಿ ಅಪರಂಜಿ ಚಿನ್ನವಾಗಬೇಕು.ಕನಸುಗಳ ಕೈ ಹಿಡಿಯಲು ಮನಸು ಕಷ್ಟಪಡಬೇಕು.ಸೋತಾಗ ನೋಯಬೇಕು.ನಂತರ ಸೋಲನ್ನು ಅರಿಯಬೇಕು. ಬದುಕಿನಲ್ಲಿ ಸಾವಿರ ಸೋಲಿನ ಸವಿ ಉಂಡವನೇ ಆರೋಗ್ಯವಂತ ಬಾಳನ್ನು ಬಾಳಬಲ್ಲ.
ಕನಸುಗಳು ಮನುಷ್ಯನಿಗೆ ಬದುಕಿನ ಉದ್ದಕ್ಕೂ ಉರಿಯುವ ದೀಪದಿಂತೆ.ಈ ಕನಸುಗಳ ಕೈ ಹಿಡಿಯಲು ಹೋದವನು ಬದುಕನ್ನು ಕನಸುಗಳ ದೀಪದಿಂದ ಅಲಂಕರಿಸಿ ದೀಪಾವಳಿಯನ್ನು ಆಚರಿಸಬಹುದು.ಹಾಗೆಯೇ ಕನಸೆಂಬ ಬೆಂಕಿಯು ಸಮಯವನ್ನು ಸುಡುತ್ತ, ಕೊನೆಗೆ ಬದುಕಿನಲ್ಲಿ ಬರಿಯ ಬೂದಿಯನ್ನು ಮಾತ್ರ ಮಿಗಿಲಿಸಬಹುದು. ಆಯ್ಕೆ ನಮ್ಮದೆ.ಫಲಿತಾಂಶ ಮಾತ್ರ ಆರಿಸಿದ ದಾರಿಯ ಮೇಲೆ ಅವಲಂಭಿತವಾಗಿರುತ್ತದೆ.
ಆದ್ದರಿಂದ ಮನಸ್ಸು ಕನಸುಗಳ ಹಿಂದೆ ಸುತ್ತುವಾಗ ಬುದ್ದಿಯನ್ನು ಎಚ್ಚರಿಸಿ ಬದುಕನ್ನು ಸುಂದರಗೊಳಿಸಬೇಕು.ಕನಸು ಮತ್ತು ಮನಸಿನ ನಡುವೆ ಸಮರವಾದಾಗ ಬದುಕು ಗೆಲ್ಲುವಂತಹ ನಿರ್ಧಾರಗಳನ್ನು ಮಾಡ್ಬೇಕು.ಬದುಕನ್ನು, ಕೊಂಚ ತಾಳ್ಮೆಯಿಂದ ನಾವಿರುವ ಪರಿಸ್ಥಿತಿಯನ್ನು ಅವಲೋಕಿಸಿ, ಬದುಕಿನ ಅನುಭವಗಳು ಹಾಗೂ ಇತರರ ಸಲಹೆಯ ಮೇರೆಗೆ, ನಮ್ಮ ಆತ್ಮಸಾಕ್ಷಿ ಒಪ್ಪುವ ನಿರ್ಧಾರಗಳನ್ನು ಮಾಡಬೇಕು. ಈ ನಿರ್ಧಾರಗಳು ಎಲ್ಲ ಬಾರಿ ಗೆಲುವು ಕೊಡದಿದ್ದರೂ ಬದುಕಿನ ಉದ್ದಕ್ಕೂ ನಮ್ಮಿಂದ ಪಶ್ಚತಾಪವನ್ನು ದೂರ ಮಾಡುತ್ತದೆ.ಯಾಕೆಂದರೆ ಇದು ನಮ್ಮ ಮನಸಾಕ್ಷಿಯ ತೀರ್ಮಾನ.
PNRai.



Comments
Post a Comment