ಭಾಗ_2

 


ಮದುವೆ —ಮನುಷ್ಯನ ಜೀವನದ ಆರಂಭವೇ?  ಜೀವನದ ಒಂದು ಸುಂದರ ಅಧ್ಯಾಯವೇ?ಅನಿವಾರ್ಯತೆಯೇ?..ಯಾವುದು ಅಲ್ಲ. ಬದುಕಿನ ಒಂದು ಭಾಗವಷ್ಟೆ.ಮದುವೆ ಅನಿವಾರ್ಯವೂ ಅಲ್ಲ.ಆಧ್ಯತೆಯೂ ಅಲ್ಲ. "ಅದೊಂದು ಆಯ್ಕೆ". ಒಬ್ಬ ವ್ಯಕ್ತಿಯ ಜೀವನ ಏನು ಅನ್ನುವುದನ್ನು ನಿರ್ಧಾರ ಮಾಡುವುದು ದುವೆಯಲ್ಲ; ಅದು ಅವನ ವ್ಯಕ್ತಿತ್ವ  ಜೀವನ ಶೖಲಿ  ಮತ್ತು ಕಾಲದ ಬದಲಾವಣೆ .ಹೌದು ಮದುವೆ  ಸಂತಾನೋತ್ಪತ್ತಿಯ ಶಿಸ್ತನ್ನು ಸಾರುವ ಒಂದು ಗಂರವಯುತವಾದ ಸಂಪ್ರದಾಯ.ಅದರೊಳಗೆ ಸಾವಿರಾರು ವಿಚಾರಗಳಿವೆ. ಅದು ಪವಿತ್ರವಾದದ್ದು ಹಾಗೂ ಚರ್ಚೆಗೆ ನಿಲುಕದ ವಿಷಯಗಳು..

ಹೌದು...ಒಂದು ಕಾಲದಲ್ಲಿ ಮದುವೆ ಎಂದರೆ ಜೀವನದ ‘Starting Line’ ಆಗಿತ್ತು. ಅಲ್ಲಿ ಹೆಣ್ಣು ಮನೆ ನಿಭಾಯಿಸುತ್ತಿದ್ದಳು, ಗಂಡು ದುಡಿಯುತ್ತಿದ್ದ. ಬೇಗ ಮದುವೆಯಾಗುವುದು, ನಂತರ ಇಬ್ಬರೂ ಸೇರಿ ಬದುಕನ್ನು ಕಟ್ಟಿಕೊಳ್ಳುವುದು—ಅದೇ ಸಹಜವಾದ ಜೀವನಕ್ರಮವಾಗಿತ್ತು.

ಆದರೆ ಈ ಜೀವನಕ್ರಮದಲ್ಲಿ ಹೆಣ್ಣು ಅತಿ ಹೆಚ್ಚು ಶೋಷಣೆಗೆ ಒಳಗಾದಳು. ಹೊರ ಪ್ರಪಂಚದ ಅರಿವಿಲ್ಲದ ಅವಳು ನಾಲ್ಕು ಗೋಡೆಗಳೇ ತನ್ನ ಬದುಕು ಎಂದುಕೊಂಡು, ಅನೇಕ ದೌರ್ಜನ್ಯಗಳನ್ನೂ ನೋವುಗಳನ್ನೂ ಸಹಿಸುತ್ತಿದ್ದಳು. ಆದರೆ ಕಾಲಕ್ರಮೇಣ ಹೆಣ್ಣಿನ ಬದುಕು ನಿಧಾನವಾಗಿ ಬದಲಾಗತೊಡಗಿತು. ಅವಳು ವಿದ್ಯೆಯ ಕಡೆಗೆ ಒಲವು ತೋರಿದಳು. ಆರ್ಥಿಕ ಸ್ವಾತಂತ್ರ್ಯದ ಪಣ ತೊಟ್ಟಳು. ತನ್ನ ಕಾಲಿನ ಮೇಲೆ ತಾನು ನಿಲ್ಲುವ ಆಸೆ ಬೆಳೆಸಿಕೊಂಡಳು. ಆಗ ಸಮಾಜದ ಹಳೆಯ ಸಮೀಕರಣಗಳು ನಿಧಾನವಾಗಿ ಅಲ್ಲಾಡತೊಡಗಿದವು. ಆ ಕಂಪನದ ಬಿಸಿ ತಟ್ಟಿದ್ದು ಮಿಲೇನಿಯಲ್ ಬದುಕಿಗೆ. ಯಾಕೆಂದರೆ ಆ ಬದಲಾವಣೆಯ ಅಲೆ ಈ ಪೀಳಿಗೆಯ ಬದುಕಿನಲ್ಲೇ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಹೌದು, ಇಲ್ಲಿ ಮದುವೆಯಾಗಿ ಸಂಪೂರ್ಣ ಗೃಹಿಣಿಯಾಗಿ ಬದುಕು ಕಟ್ಟಿಕೊಂಡ ಹೆಣ್ಣುಮಕ್ಕಳಿದ್ದಾರೆ. ವೃತ್ತಿಜೀವನದ ಜೊತೆ ಮದುವೆಯಾಗಿ, ಸಂಸಾರ ಮತ್ತು ವೃತ್ತಿ—ಎರಡನ್ನೂ ಸಮದೂಗಿಸಲು ಸಾಧ್ಯವಾಗದೆ ದೂರವಾದವರಿದ್ದಾರೆ. ಪ್ರೀತಿಯಲ್ಲಿ ಬಿದ್ದು, ಹೊಂದಾಣಿಕೆಯಾಗದೆ ದೂರವಾದವರಿದ್ದಾರೆ. ಮೋಸ ಹೋದವರಿದ್ದಾರೆ, ಮೋಸ ಮಾಡಿದವರಿದ್ದಾರೆ. ಇವೆಲ್ಲವನ್ನೂ ದೂರದಿಂದಲೇ ನೋಡಿ, “ಈ ಪ್ರೀತಿ, ಮದುವೆ, ಸಂಬಂಧಗಳ ಗೊಂದಲ ನಮಗೆ ಬೇಡ; ನಮ್ಮ ಕೆಲಸ ಮಾಡಿಕೊಂಡು ನೆಮ್ಮದಿಯಾಗಿರೋಣ” ಎಂದು ಇವೆಲ್ಲವುಗಳಿಂದ ದೂರ ಉಳಿದವರೂ ಇದ್ದಾರೆ. ಹಾಗೆಯೇ ವೃತ್ತಿ ಮತ್ತು ಸಂಸಾರ ಎರಡರಲ್ಲೂ ಯಶಸ್ಸು ಕಂಡವರೂ ಇದ್ದಾರೆ. ಇವೆಲ್ಲವನ್ನೂ ಹೊರಗಿನಿಂದ ನೋಡುವವರಿಗೆ ಅವರವರ ಆಯ್ಕೆಗಳು ತಪ್ಪಾಗಿ ಕಾಣಬಹುದು. ಆದರೆ ಇದು ಕೇವಲ ಯಾರೊಬ್ಬರ ತಪ್ಪು ಅಥವಾ ಸರಿಯ ಕಥೆಯಲ್ಲ. ಇದು ಕಾಲ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾದ ಒಂದು ಹೊಸ ಜೀವನಕ್ರಮ. ಇಲ್ಲಿ ಯಾರ ತಪ್ಪು, ಯಾರ ಒಪ್ಪಿಗೆ ಎನ್ನುವುದಕ್ಕಿಂತ, ಪರಿವರ್ತನೆಯ ಪಾಠವೇ ಬಹಳ ಆಳವಾಗಿದೆ.


ಆದ್ದರಿಂದ ಇಂದಿನ ಮಿಲೇನಿಯಲ್ಸ್ ಪಾಲಿಗೆ ಮದುವೆ ಬಹುಶಃ ಜೀವನದ ಆರಂಭವಲ್ಲ; ಈಗಾಗಲೇ ಕಟ್ಟಿಕೊಂಡಿರುವ ಬದುಕಿನ ಮೇಲೆ ಇಡುವ ಒಂದು ಸುಂದರ ‘ಛಾವಣಿ’. ಅವರು ಮೊದಲು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಒಂದು ಸ್ಥಿರವಾದ ವೃತ್ತಿಜೀವನ. ಸ್ವಲ್ಪ ಆರ್ಥಿಕ ಭದ್ರತೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ. ತಮ್ಮ ಕನಸುಗಳಿಗೆ ಒಂದು ರೂಪ. ಮತ್ತು ಮುಖ್ಯವಾಗಿ—“ನಾನು ಯಾರು? ನನಗೆ ನಿಜವಾಗಿ ಏನು ಬೇಕು?” ಎಂಬ ಪ್ರಶ್ನೆಗೆ ಒಂದು ಸ್ಪಷ್ಟ ಉತ್ತರ. ಅದಾದ ನಂತರವೇ ಮತ್ತೊಬ್ಬರನ್ನು ತಮ್ಮ ಜೀವನದೊಳಗೆ ಕರೆತರಲು ಅವರು ಸಿದ್ಧರಾಗುತ್ತಾರೆ. ಇದು ಮದುವೆಯನ್ನು ತಿರಸ್ಕರಿಸುವ ಮನಸ್ಥಿತಿಯಲ್ಲ; ಮದುವೆಯ ಅರ್ಥವನ್ನು ಇನ್ನಷ್ಟು ಗಂಭೀರವಾಗಿ ನೋಡುವ ಮನಸ್ಥಿತಿ.




ವಯಸ್ಸಿಗಿಂತ ಯೋಗ್ಯತೆ ಮುಖ್ಯವಾದಾಗ...

ಒಮ್ಮೆ “ಮದುವೆಯಾಗುವ ವಯಸ್ಸು” ಮುಖ್ಯವಾಗಿತ್ತು. ಈಗ “ಮದುವೆಯಾಗಲು ಯೋಗ್ಯವಾದ ವ್ಯಕ್ತಿ” ಮುಖ್ಯವಾಗುತ್ತಿದೆ.ಸಮಾಜ ಕೇಳಬಹುದು—“ಇನ್ನೂ ಮದುವೆಯಾಗಿಲ್ಲವೇ?”, “ವಯಸ್ಸು ಎಷ್ಟಾಗಿದೆ ಗೊತ್ತೇ?”, “ಇನ್ನೂ ಎಷ್ಟು ದಿನ ಕಾಯುತ್ತೀಯ?” ಆದರೆ ಈ ಪೀಳಿಗೆಯ ಮನಸ್ಸಿನಲ್ಲಿ ಮತ್ತೊಂದು ಪ್ರಶ್ನೆ ಇದೆ—“ಜೀವನಪೂರ್ತಿ ನನ್ನ ಜೊತೆ ನಡೆಯುವ ವ್ಯಕ್ತಿ ಯಾರು?”ಆ ಪ್ರಶ್ನೆಗೆ ಉತ್ತರ ಸಿಗುವವರೆಗೆ ಕಾಯಲು ಅವರು ಸಿದ್ಧರಾಗಿದ್ದಾರೆ. ಏಕೆಂದರೆ ಅವರಿಗೆ ಒಂದು ವಿಷಯ ಅರ್ಥವಾಗಿದೆ—ತಪ್ಪು ವ್ಯಕ್ತಿಯೊಂದಿಗೆ ಬೇಗ ಮದುವೆಯಾಗುವುದಕ್ಕಿಂತ, ಸರಿಯಾದ ವ್ಯಕ್ತಿಗಾಗಿ ಸ್ವಲ್ಪ ತಡವಾಗಿ ಕಾಯುವುದು ಉತ್ತಮ.


ಅವರು ತಡ ಮಾಡಲಿಲ್ಲ… ಕಾಲವೇ ಬದಲಾಗಿತ್ತು.

ಇಂದಿನ ಪೀಳಿಗೆಯನ್ನು “ತಡವಾಗಿ settle ಆಗುತ್ತಿದ್ದಾರೆ” ಎಂದು ನೋಡುವುದು ಸುಲಭ. ಆದರೆ ಅವರ ಕಥೆಯನ್ನು ಸ್ವಲ್ಪ ಆಳವಾಗಿ ನೋಡಿದರೆ ಚಿತ್ರವೇ ಬೇರೆ. ಹೆಚ್ಚಿನ ವಿದ್ಯಾಭ್ಯಾಸ. ಹೆಚ್ಚಿದ ಸ್ಪರ್ಧೆ. ತಡವಾದ career. ಹೆಚ್ಚಿದ ಜೀವನ ವೆಚ್ಚ. ಆಕಾಶಕ್ಕೇರಿದ ಮನೆ ಬೆಲೆಗಳು. ಉದ್ಯೋಗದ ಅನಿಶ್ಚಿತತೆ. ಮತ್ತು ಇವೆಲ್ಲದರ ನಡುವೆ ತಮ್ಮದೇ ಆದ ಬದುಕನ್ನು ಕಟ್ಟಿಕೊಳ್ಳುವ ಹೋರಾಟ.ಅವರ 20ರ ಹರೆಯ ಬಹಳಷ್ಟು ಜನರಿಗೆ ಬದುಕನ್ನು ಅನುಭವಿಸುವ ಕಾಲಕ್ಕಿಂತ, ಬದುಕನ್ನು ಕಟ್ಟಿಕೊಳ್ಳುವ ಕಾಲವಾಗಿತ್ತು. ಅವರು ಕೇವಲ ಹಣ ಸಂಪಾದಿಸಲಿಲ್ಲ. ಅವರು ತಮ್ಮನ್ನೇ ತಾವು ಕಟ್ಟಿಕೊಂಡರು.

30ರ ನಂತರ ಬರುವ ಒಂದು ವಿಚಿತ್ರವಾದ ಸ್ಪಷ್ಟತೆ.

20ರಲ್ಲಿ ನಾವು ಜಗತ್ತನ್ನು ಬದಲಾಯಿಸಲು ಬಯಸುತ್ತೇವೆ. 30ರಲ್ಲಿ ಜಗತ್ತು ನಮ್ಮನ್ನು ಹೇಗೆ ಬದಲಾಯಿಸಿದೆ ಎಂಬುದು ಅರ್ಥವಾಗುತ್ತದೆ. ಮತ್ತು 35ರ ಹೊತ್ತಿಗೆ—ಯಾರನ್ನು ಮೆಚ್ಚಿಸಬೇಕು ಎಂಬುದಕ್ಕಿಂತ ಯಾರ ಜೊತೆ ನೆಮ್ಮದಿಯಾಗಿರಬೇಕು ಎಂಬುದು ಮುಖ್ಯವಾಗುತ್ತದೆ.


ಎಷ್ಟು ಜನ ನಮ್ಮ ಜೀವನದಲ್ಲಿದ್ದಾರೆ ಎಂಬುದಕ್ಕಿಂತ, ಯಾರು ನಿಜವಾಗಿ ನಮ್ಮವರಾಗಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಎಲ್ಲರಿಗೂ ಇಷ್ಟವಾಗಬೇಕು ಎಂಬುದಕ್ಕಿಂತ, ನಮ್ಮದೇ ಆದ ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು ಎಂಬುದು ಮುಖ್ಯವಾಗುತ್ತದೆ.ಹಣದ ಬೆಲೆ ಗೊತ್ತಾಗುತ್ತದೆ. ಸಮಯದ ಬೆಲೆ ಗೊತ್ತಾಗುತ್ತದೆ. ಒಳ್ಳೆಯ ಸಂಬಂಧದ ಬೆಲೆ ಗೊತ್ತಾಗುತ್ತದೆ. ಮತ್ತು ತಪ್ಪು ಸಂಬಂಧದ ಬೆಲೆಯೂ ಗೊತ್ತಾಗುತ್ತದೆ.ಅದರಲ್ಲೇ 35ರ ನಂತರದ ವ್ಯಕ್ತಿ, 25ರ ವ್ಯಕ್ತಿಯಂತಿರುವುದಿಲ್ಲ. ಅವನ ಬಳಿ ಕೇವಲ ವಯಸ್ಸು ಹೆಚ್ಚಾಗಿರುವುದಿಲ್ಲ; ಅನುಭವ ಹೆಚ್ಚಾಗಿರುತ್ತದೆ.“ನನ್ನನ್ನು ಯಾರಾದರೂ ನೋಡಿಕೊಳ್ಳಬೇಕು” ಎಂಬ ಅಗತ್ಯದಿಂದ ಅಲ್ಲ; “ನನ್ನ ಜೊತೆ ಜೀವನವನ್ನು ಹಂಚಿಕೊಳ್ಳಲು ಯೋಗ್ಯವಾದ ವ್ಯಕ್ತಿ ಬೇಕು” ಎಂಬ ಆಯ್ಕೆಯಿಂದ.ಅದು ಒಂಟಿತನದಿಂದ ತಪ್ಪಿಸಿಕೊಳ್ಳಲು ಮಾಡುವ ಮದುವೆಯಲ್ಲ. ಒಬ್ಬರ ಜೀವನಕ್ಕೆ ಮತ್ತೊಬ್ಬರು ನೆಮ್ಮದಿಯ ಸೆಳೆಯಾಗುವ ಭರವಸೆಯ ಮದುವೆ.ಅದು ಜೀವನವನ್ನು ಆರಂಭಿಸಲು ಮಾಡುವ ಪ್ರಯತ್ನವಲ್ಲ. ಈಗಾಗಲೇ ಕಟ್ಟಿಕೊಂಡಿರುವ ಜೀವನವನ್ನು ಒಬ್ಬರೊಂದಿಗೆ ಹಂಚಿಕೊಳ್ಳುವ ನಿರ್ಧಾರ. ಮತ್ತು ಬಹುಶಃ ಇದೇ ಈ ಪೀಳಿಗೆಯ ದೊಡ್ಡ ಬದಲಾವಣೆ.

ವೈಜ್ಞಾನಿಕವಾಗಿ ಸಂಸಾರ ಕಟ್ಟಿಕೊಳ್ಳಲು ಯೌವ್ವನದ ವಯಸ್ಸು ಮುಖ್ಯವಾಗಿರಬಹುದು. ಆದರೆ ಇಂದು ಮನುಷ್ಯ ಕೇವಲ ಸಂಸಾರ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಾತ್ರ ಬದುಕುತ್ತಿಲ್ಲ. ಅವನ ಯೋಚನೆಗಳೇ ಬದಲಾಗಿವೆ. ಬದುಕಿನ ವ್ಯಾಖ್ಯಾನವೇ ಬದಲಾಗಿದೆ.ಮುಂದಿನ ಪೀಳಿಗೆಯ ಸಂಖ್ಯೆಯನ್ನು ಹೆಚ್ಚಿಸುವುದಕ್ಕಿಂತ, ಮುಂದಿನ ಪೀಳಿಗೆಗೆ ಸುಂದರವಾದ ಬದುಕನ್ನು ಕಟ್ಟಿಕೊಡುವುದು ಮುಖ್ಯವಾಗಿದೆ.

ಹಿಂದೆ—

“ಮದುವೆಯಾದ ಮೇಲೆ ಜೀವನ ಕಟ್ಟಿಕೊಳ್ಳೋಣ.”

ಈಗ—

“ಮೊದಲು ಜೀವನ ಕಟ್ಟಿಕೊಳ್ಳೋಣ; ನಂತರ ಅದನ್ನು ಹಂಚಿಕೊಳ್ಳಲು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡೋಣ.”

ಹಿಂದಿನ ಪೀಳಿಗೆಗೆ ಮದುವೆ ಬದುಕಿನ ಆರಂಭ ಆಗಿದ್ದರೆ, ಈ ಪೀಳಿಗೆಗೆ ಅದು ಬದುಕನ್ನು ಕಟ್ಟಿ ಕೊಂಡ ಅದೇ ಬಾಳನ್ನು ಪೂರ್ಣಗೊಳಿಸುವ ಒಂದು ಭದ್ರವಾದ ಸುಂದರ ಛಾವಣಿ.

ಒಂದು ಅಂತ್ಯವಲ್ಲ.

ಈಗಾಗಲೇ ಬದುಕಿದ ಜೀವನದ ಮೇಲೆ ಇಡುವ ಮತ್ತೊಂದು ಸುಂದರ ಅಧ್ಯಾಯ.

ಹಾಗಾಗಿ 35ರ ನಂತರ ಬದುಕು ತಡವಾಗುವುದಿಲ್ಲ.ಬಹುಶಃ…

35ರ ನಂತರವೇ ಮೊದಲ ಬಾರಿಗೆ, ಇತರರು ಬಯಸಿದ ಜೀವನವಲ್ಲ—ನಾವು ನಿಜವಾಗಿ ಬಯಸಿದ ಜೀವನವನ್ನು ಬದುಕಲು ಆರಂಭಿಸುತ್ತೇವೆ.ಏಕೆಂದರೆ ಜೀವನದ ಅರ್ಥ ಬೇಗನೆ ಎಲ್ಲವನ್ನೂ ಮುಗಿಸುವುದಲ್ಲ. ನಮ್ಮದೇ ಸಮಯದಲ್ಲಿ, ನಮ್ಮದೇ ನಿಯಮಗಳಲ್ಲಿ, ನಮ್ಮ ಮನಸ್ಸಿಗೆ ನೆಮ್ಮದಿ ನೀಡುವ ರೀತಿಯಲ್ಲಿ ಅದನ್ನು ಸುಂದರವಾಗಿ ಬದುಕುವುದೇ ನಿಜವಾದ ಯಶಸ್ಸು.

ಆದ್ದರಿಂದ ಮಿಲೇನಿಯಲ್ಸ್‌ನ್ನು ಪ್ರಶ್ನಿಸುವುದನ್ನು ನಿಲ್ಲಿಸಿ. “ಇನ್ನೂ ಮದುವೆಯಾಗಿಲ್ಲವೇ?”, “ಇಷ್ಟು ತಡವೇಕೆ?”, “ಮುಂದೇನು?” ಎಂಬ ಪ್ರಶ್ನೆಗಳಿಗೆ ಪ್ರತಿಯೊಬ್ಬರೂ ಉತ್ತರಿಸಬೇಕೆಂದೇನಿಲ್ಲ. ನಾವು ಹೊರಗಿನಿಂದ ನೋಡುವುದು ಅವರ ವಯಸ್ಸನ್ನು ಮಾತ್ರ; ಆದರೆ ಅವರು ಬದುಕಿರುವುದು ಅವರ ಸಂಪೂರ್ಣ ಜೀವನವನ್ನು. ಅವರ ನಿರ್ಧಾರಗಳ ಹಿಂದೆ ವರ್ಷಗಳ ಅನುಭವವಿದೆ. ಅವರ ಮೌನದ ಹಿಂದೆ ಅನೇಕ ಕಥೆಗಳಿವೆ. ಅವರ ತಡದ ಹಿಂದೆ ಒಂದು ಕಾಲದ ಬದಲಾವಣೆಯಿದೆ. ಯಾರಿಗೋ ಮದುವೆ ಬದುಕಿನ ಆರಂಭವಾಗಬಹುದು; ಇನ್ನೊಬ್ಬರಿಗೆ ಅದು ಈಗಾಗಲೇ ಕಟ್ಟಿಕೊಂಡಿರುವ ಬದುಕಿನ ಒಂದು ಸುಂದರ ಅಧ್ಯಾಯವಾಗಬಹುದು. ಯಾರಿಗೋ ವೃತ್ತಿಯೇ ಕನಸಾಗಿರಬಹುದು; ಮತ್ತೊಬ್ಬರಿಗೆ ಸ್ವಾತಂತ್ರ್ಯವೇ ನೆಮ್ಮದಿಯಾಗಿರಬಹುದು. ಯಾವುದನ್ನೂ ಒಂದೇ ಅಳತೆಯಿಂದ ಅಳೆಯಲು ಸಾಧ್ಯವಿಲ್ಲ. ಏಕೆಂದರೆ ಬದುಕು ಎಲ್ಲರಿಗೂ ಒಂದೇ ಗಡಿಯಾರದಲ್ಲಿ ನಡೆಯುವುದಿಲ್ಲ. ಕೆಲವರು ತಮ್ಮನ್ನು 25ರಲ್ಲಿ ಕಂಡುಕೊಳ್ಳುತ್ತಾರೆ, ಕೆಲವರು 35ರಲ್ಲಿ, ಇನ್ನೂ ಕೆಲವರು ಅದಕ್ಕಿಂತ ಬಹಳ ನಂತರ. ಅದು ತಡವಲ್ಲ—ಅದು ಅವರ ಸಮಯ.ಕೆಲವರು ಏಕಾಂಗಿಯಾಗಿ ಸ್ವತಂತ್ರವಾಗಿರಲೂ ಬಯಸಬಹುದು. ಅದು ಅವರ ಇಚ್ಛೆ ಹಾಗೂ ಆಯ್ಕೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.

ಕೊನೆಗೆ ಜೀವನವೆಂದರೆ ಎಲ್ಲರೂ ಒಂದೇ ದಾರಿಯಲ್ಲಿ ಓಡಿ ಒಂದೇ ಗಮ್ಯವನ್ನು ತಲುಪುವ ಸ್ಪರ್ಧೆಯಲ್ಲ. ಅದು ಪ್ರತಿಯೊಬ್ಬರೂ ತಮ್ಮದೇ ದಾರಿಯಲ್ಲಿ, ತಮ್ಮದೇ ವೇಗದಲ್ಲಿ, ತಮ್ಮದೇ ಅರ್ಥವನ್ನು ಹುಡುಕುತ್ತ ಸಾಗುವ ಪ್ರಯಾಣ. ಆದ್ದರಿಂದ ಮಿಲೇನಿಯಲ್ಸ್‌ನ್ನು ಪ್ರಶಂಸಿಸುವ ಅಗತ್ಯವೂ ಇಲ್ಲ, ಪ್ರಶ್ನಿಸುವ ಅಗತ್ಯವೂ ಇಲ್ಲ—ಅವರನ್ನು ಅವರ ರೀತಿಯಲ್ಲಿ ಬದುಕಲು ಬಿಡಿ. ಏಕೆಂದರೆ ಕೆಲವು ಬದುಕುಗಳನ್ನು ಸಮಾಜ ಅರ್ಥಮಾಡಿಕೊಳ್ಳುವುದಿಲ್ಲ; ಕಾಲವೇ ಅರ್ಥಮಾಡಿಕೊಳ್ಳುತ್ತದೆ. ಕೆಲವು ನಿರ್ಧಾರಗಳಿಗೆ ಸಮಾಜ ಒಪ್ಪಿಗೆ ನೀಡುವುದಿಲ್ಲ; ಅನುಭವವೇ ಅವುಗಳನ್ನು ಸಮರ್ಥಿಸುತ್ತದೆ. ಮತ್ತು ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವೇ ಇರುವುದಿಲ್ಲ—ಒಂದು ದಿನ ಬದುಕೇ ಅವುಗಳಿಗೆ ಉತ್ತರವಾಗಿ ನಿಂತಿರುತ್ತದೆ.

ಇದು ಯಾರ ತಪ್ಪೂ ಅಲ್ಲ. ಯಾರ ಗೆಲುವೂ ಅಲ್ಲ. ಇದು ಕೇವಲ ಕಾಲ ಬದಲಾಗುತ್ತಿರುವುದರ ಸಾಕ್ಷಿ. ಬದುಕಿನ ವ್ಯಾಖ್ಯಾನ ಬದಲಾಗುತ್ತಿರುವುದರ ಸಾಕ್ಷಿ. ಮತ್ತು ತನ್ನದೇ ಬದುಕನ್ನು ತನ್ನದೇ ರೀತಿಯಲ್ಲಿ ಬದುಕಲು ಕಲಿಯುತ್ತಿರುವ ಒಂದು ಪೀಳಿಗೆಯ ಸುಂದರ ಗುರುತು.

ಹಾಗಾಗಿ ಸಮಾಜದ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಅಗತ್ಯವಿಲ್ಲ. ಏಕೆಂದರೆ ಬದುಕಿನ ಕೆಲವು ಉತ್ತರಗಳನ್ನು ಮಾತುಗಳಿಂದ ಕೊಡಲಾಗುವುದಿಲ್ಲ—ಅವನ್ನು ಬದುಕಿಯೇ ತೋರಿಸಬೇಕು. ಕೊನೆಗೆ ಕಾಲವೇ ನಿರ್ಣಯಿಸುತ್ತದೆ; ನಾವು ಮಾಡಬೇಕಾದದ್ದು ಒಂದೇ—ನಮ್ಮ ಸಮಯವನ್ನು, ನಮ್ಮ ಬದುಕನ್ನು, ನಮ್ಮ ನೆಮ್ಮದಿಯನ್ನು ಮತ್ತೊಬ್ಬರ ಅಳತೆಯಲ್ಲಿ ಅಳೆಯದೆ, ನಮ್ಮದೇ ರೀತಿಯಲ್ಲಿ ಸುಂದರವಾಗಿ ಬದುಕುವುದು.

Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..