ಭಾವನೆಗಳ ಮಾಯಲೋಕದ ಆಚೆಗೆ
ಖಾಲಿ ಹೃದಯ, ಆಕಾಶ ನೀಲಿ ರಂಗು, ಮನದಾಳದಲ್ಲಿ ಸದ್ದಾಗದಂತೆ ಭೋರ್ಗರೆಯುವ ಹಗುರವಾದ ಭಾವದಲೆಗಳು… ಬದುಕು ಒಂದು ಶಾಂತ ಸಾಗರ. ಮೌನರಾಗದ ಜೊತೆ, ಪ್ರಶಾಂತವಾದ ಮಾತುಕತೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಆ ಸಮಯದ ಚಂದವೇ ಬೇರೆ ಲೆವೆಲ್.
ಇಂತಹ ಬದುಕನ್ನು ನೋಡುವ ಕೆಲವರು ಇಂಗ್ಲಿಷ್‌ನಲ್ಲಿ “Boring Personality” ಎಂದು ಕರೆಯಬಹುದು. ಆದರೆ ನಿಜವಾಗಿಯೂ ಮೌನವಾಗಿರುವ ಮನಸ್ಸು ಬೋರ್ ಆಗಿರುತ್ತದೆಯೇ? ಒಂಟಿಯಾಗಿ ಇರುವ ವ್ಯಕ್ತಿ ಖಾಲಿಯಾಗಿರುತ್ತಾನೆಯೇ? ಬಹುಶಃ ಇಲ್ಲ.
ವಾಸ್ತವವಾಗಿ ನೋಡಿದರೆ, ಮೌನ ಮತ್ತು ಒಂಟಿತನ ಎರಡೂ ಭಯಾನಕ. ಮನುಷ್ಯ ಭಾವನಾಜೀವಿ. ತನ್ನ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂಬ ಆಸೆ ಅವನಿಗಿದೆ. ಸಂಘ-ಒಡನಾಟ ಅವನಿಗೆ ಉಸಿರಾಟದಷ್ಟೇ ಅವಶ್ಯಕ. ಸಂತೋಷವನ್ನು ಹಂಚಿಕೊಳ್ಳಲು ಯಾರಾದರೂ ಬೇಕು; ನೋವನ್ನು ಕೇಳಲು ಮತ್ತೊಬ್ಬರು ಬೇಕು.
ಆದರೆ ವಾಸ್ತವ ಮತ್ತು ಕಲ್ಪನೆ—ಇವೆರಡನ್ನೂ ಮೀರಿಸುವ ಒಂದು ಸತ್ಯವಿದೆ. ಅದು ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ. ಇವೆರಡನ್ನು ಸಂಪೂರ್ಣವಾಗಿ ಬಲ್ಲವರು ಯಾರಾದರೂ ಇದ್ದಾರೆಯೇ? ಖಂಡಿತ ಇಲ್ಲ.
ಹಾಗಾದರೆ ಈ ಒಂಟಿತನ, ಈ ಮೌನ, ಹುಟ್ಟಿನ ಹಿಂದಿನ ಗತ ಮತ್ತು ಸಾವಿನ ನಂತರದ ಭವಿಷ್ಯ—ಇವೆಲ್ಲಕ್ಕೂ ಏನಾದರೂ ಸಂಬಂಧವಿದೆಯೇ? ಬಹುಶಃ ಇದೆ. ಅದೇನು ಎಂಬುದನ್ನು ಅರಿಯುವ ಪ್ರಯತ್ನವೇ ಬದುಕಿನ ಮತ್ತೊಂದು ಪಯಣ.
ನಾವು ಹುಟ್ಟಿನಿಂದಲೇ ಒಂದು ನಂಟನ್ನು ಹೊತ್ತುಕೊಂಡು ಬರುತ್ತೇವೆ. ತಾಯಿಯ ಗರ್ಭದ ನಂಟು. ಆ ನಂಟಿನ ಮೊದಲ ಉಸಿರಿನಿಂದಲೇ ಮನುಷ್ಯ ಈ ಭೌತಿಕ ಪ್ರಪಂಚದೊಂದಿಗೆ ಸಂಬಂಧ ಕಟ್ಟಿಕೊಳ್ಳಲು ಆರಂಭಿಸುತ್ತಾನೆ. ಆ ಗರ್ಭದ ನಂಟು ಕೊನೆಗೊಳ್ಳುವುದು ಚಟ್ಟದಲ್ಲೇ. ಆದರೆ ಅದರ ಮಧ್ಯೆ ಮನುಷ್ಯ ಸಂಬಂಧಗಳ ಒಂದು ದೊಡ್ಡ ಜಾಲವನ್ನೇ ಕಟ್ಟಿಕೊಳ್ಳುತ್ತಾನೆ.
ತಾಯಿ, ತಂದೆ, ಸಹೋದರ-ಸಹೋದರಿ, ಸ್ನೇಹಿತರು, ಸಂಗಾತಿ, ಮಕ್ಕಳು, ಬಂಧುಗಳು, ಪರಿಚಯಸ್ಥರು… ಹೀಗೆ ಮನುಷ್ಯ ಸಂಸಾರಿಯಾಗಿ ಸಂಬಂಧಗಳ ಬಂಧನಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಆ ಹಾದಿಯಲ್ಲೇ ಸಾಗುತ್ತಾ ಹೋಗುತ್ತಾನೆ.
ಸಂಬಂಧಗಳಿಗೆ ನಂಟಾದ ಮನುಷ್ಯ ಭಾವನೆಗಳಿಗೆ ನಂಟಾಗುತ್ತಾನೆ. ಅವನ ಬದುಕಿನ ಪ್ರತಿಯೊಂದು ಕ್ಷಣವೂ ಯಾವುದೋ ಒಂದು ಭಾವನೆಯೊಂದಿಗೆ ಬೆಸೆದುಕೊಂಡಿರುತ್ತದೆ. ಆ ಭಾವನೆಗಳನ್ನು ಅವನು ಮಾತಿನ ಮೂಲಕ ತನ್ನ ಸುತ್ತಲಿರುವವರಿಗೆ ವ್ಯಕ್ತಪಡಿಸುತ್ತಾನೆ. ಆದ್ದರಿಂದಲೇ ಮನುಷ್ಯ ಮೌನಕ್ಕಿಂತ ಮಾತಿಗೆ ಹೆಚ್ಚು ಒತ್ತು ಕೊಡುತ್ತಾನೆ; ಒಂಟಿತನಕ್ಕಿಂತ ಒಡನಾಟವನ್ನು ಹೆಚ್ಚು ಬಯಸುತ್ತಾನೆ.
ಆದರೆ ಬದುಕನ್ನು ಸ್ವಲ್ಪ ದೂರದಿಂದ ನಿಂತು ನೋಡಿದರೆ ಒಂದು ವಿಚಿತ್ರ ಸತ್ಯ ಗೋಚರಿಸುತ್ತದೆ. ಮನುಷ್ಯ ಬದುಕಿನಲ್ಲಿ ಅಂತಿಮವಾಗಿ ಪಡೆದುಕೊಳ್ಳುವುದೂ, ಕಳೆದುಕೊಳ್ಳುವುದೂ ಹೆಚ್ಚಾಗಿ ಸಂಬಂಧಗಳು ಮತ್ತು ಭಾವನೆಗಳನ್ನೇ.
ಹಲವು ಪರಿಚಯಗಳು ಸಂಬಂಧಗಳಾಗುತ್ತವೆ. ಆ ಸಂಬಂಧಗಳು ಭಾವನೆಗಳ ಮುಂಗಾರನ್ನು ಸುರಿಸುತ್ತವೆ. ಕೆಲವು ಸಂಬಂಧಗಳು ಬದುಕಿಗೆ ಬಣ್ಣ ತುಂಬುತ್ತವೆ. ಕೆಲವು ಸಂಬಂಧಗಳು ಗಾಯ ಮಾಡುತ್ತವೆ. ಕೆಲವು ಕೈ ಹಿಡಿದು ನಡೆಸುತ್ತವೆ. ಕೆಲವು ಕೈಬಿಟ್ಟು ಹೋಗುತ್ತವೆ.
ಕೊನೆಗೆ ಕೆಲವು ಸಂಬಂಧಗಳು ಕಡಿದುಹೋಗುತ್ತವೆ. ಆದರೆ ಅವು ಬಿಟ್ಟುಹೋದ ಭಾವನೆಗಳು ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅವು ನೆನಪಾಗಿ, ಪ್ರಶ್ನೆಯಾಗಿ, ನೋವಾಗಿ, ಪಾಠವಾಗಿ ನಮ್ಮೊಳಗೆ ಉಳಿದುಕೊಳ್ಳುತ್ತವೆ. ಕೆಲವೊಮ್ಮೆ ಆ ಭಾವನೆಗಳ ತೂಕವನ್ನು ಹೊತ್ತುಕೊಳ್ಳಲಾರದೆ ಮನಸ್ಸು ದಣಿದುಹೋಗುತ್ತದೆ. ಕೊನೆಗೆ ಮನುಷ್ಯ ಖಾಲಿ ಹೃದಯದ ಮಾಲಿಕನಾಗುತ್ತಾನೆ.
ನನಗನಿಸುವಂತೆ, ಮನುಷ್ಯನ ಬದುಕಿನಲ್ಲಿ ಅತ್ಯಂತ ವಿಚಿತ್ರವೂ ವಿಶೇಷವೂ ಆದದ್ದು ಯಾವುದಾದರೂ ಇದ್ದರೆ ಅದು ಭಾವನೆಗಳು. ನಮ್ಮಲ್ಲಿ ಈ ಭಾವನೆಗಳನ್ನು ಸೃಷ್ಟಿಸುವಲ್ಲಿ ಪಂಚೇಂದ್ರಿಯಗಳ ಪಾತ್ರವೂ ಆಳವಾದದ್ದು.
ಒಂದು ದೃಶ್ಯ, ಒಂದು ಧ್ವನಿ, ಒಂದು ಪರಿಮಳ, ಒಂದು ಸ್ಪರ್ಶ ಅಥವಾ ಒಂದು ರುಚಿ—ಇವುಗಳಲ್ಲಿ ಯಾವುದಾದರೂ ಒಂದು ಕ್ಷಣದಲ್ಲಿ ಮನಸ್ಸಿನೊಳಗೆ ಯಾವುದೋ ಬಾಗಿಲನ್ನು ತೆರೆದುಬಿಡಬಹುದು. ಅಲ್ಲಿಂದ ಒಂದು ನೆನಪು ಹುಟ್ಟಬಹುದು. ಒಂದು ಭಾವನೆ ಮೂಡಬಹುದು. ಒಂದು ಕಥೆ ಆರಂಭವಾಗಬಹುದು.
ಭಾವನೆಗಳು ಮಾಯೆಯೇ? ಹೌದು. ಬಹುಶಃ ಭಾವನೆಗಳೂ ಮನುಷ್ಯನ ಮನಸ್ಸಿನೊಂದಿಗೆ ಇರುವ ಒಂದು ಅದ್ಭುತ ಮಾಯೆಯೇ. ಮನಸ್ಸಿನ ಕುಲುಮೆಯಲ್ಲಿ ಅದೆಷ್ಟೋ ವಿಷಯಗಳು ಬೆಂದು, ಬೇಯುತ್ತಾ, ಬದುಕನ್ನು ಮಾಗಿಸುತ್ತವೆ. ಅವು ಅನುಭವಗಳಾಗಿ ರೂಪುಗೊಳ್ಳುತ್ತವೆ. ಆ ಅನುಭವಗಳು ಮನುಷ್ಯನನ್ನು ಬದಲಾಯಿಸುತ್ತವೆ.
ಆದರೆ ಈ ಭಾವನೆಗಳು ಎಲ್ಲಿ ಹುಟ್ಟುತ್ತವೆ? ಯಾವಾಗ ಹುಟ್ಟುತ್ತವೆ? ಹೇಗೆ ಹುಟ್ಟುತ್ತವೆ? ಇದಕ್ಕೆ ಸಂಪೂರ್ಣ ಉತ್ತರ ಯಾರಿಗೂ ಗೊತ್ತಿಲ್ಲ.
ನಲವು, ನೋವು, ನಗು, ಅಳು, ಸ್ನೇಹ, ಪ್ರೀತಿ, ಮಮತೆ, ವಾತ್ಸಲ್ಯ, ಕೋಪ, ತಾಪ, ದ್ವೇಷ, ಸೇಡು, ಮತ್ಸರ… ಇವೆಲ್ಲವೂ ಒಂದೇ ಮನಸ್ಸಿನ ಬೇರೆ ಬೇರೆ ಮುಖಗಳು. ಒಂದೇ ಮನುಷ್ಯನಲ್ಲಿ ಇಷ್ಟೊಂದು ವಿರುದ್ಧ ಭಾವನೆಗಳು ಹೇಗೆ ಸಹಬಾಳ್ವೆ ನಡೆಸುತ್ತವೆ ಎಂಬುದೇ ಒಂದು ಅದ್ಭುತ.
ಮನುಷ್ಯನ ಬದುಕಿನಲ್ಲಿ ಕಣ್ಣಿಗೆ ಕಾಣದ ಹಲವು ಮಾಯಾಜಾಲಗಳಿವೆ—ಮನಸ್ಸು, ಬುದ್ಧಿ, ಭಾವನೆ, ಆಸೆ, ಪ್ರೀತಿ, ಸ್ನೇಹ, ಸಂಬಂಧ, ಆಕಾಂಕ್ಷೆ, ಭಯ, ನೆನಪು… ಇವುಗಳ ಜಾಲದಲ್ಲಿ ಸಿಲುಕದ ಜೀವ ಬಹುಶಃ ಈ ಜಗತ್ತಿನಲ್ಲಿ ಇಲ್ಲ.
ಭಾವನೆಗಳ ನೇರ ರೂಪ ಕಣ್ಣಿಗೆ ಕಾಣುವುದಿಲ್ಲ. ಆದರೆ ಬೇರೆಯವರ ಭಾವನೆಗಳ ಹಲವು ರೂಪಗಳನ್ನು ನಮ್ಮ ಕಣ್ಣು ಗುರುತಿಸಬಲ್ಲದು. ಕೆಲವೊಮ್ಮೆ ಒಂದು ನೋಟವೇ ಸಾಕು. ಕೆಲವೊಮ್ಮೆ ಒಂದು ಸ್ಪರ್ಶವೇ ಸಾಕು. ಕೆಲವೊಮ್ಮೆ ಒಂದು ಮಾತೇ ಸಾಕು. ಇನ್ನೂ ಕೆಲವರಿಗೆ ಭಾವನೆಗಳೇ ಉಸಿರಾಟವಾಗಿರಬಹುದು.
ಪ್ರತಿಯೊಬ್ಬರಿಗೂ ಭಾವನೆಗಳ ಅರ್ಥ ಬೇರೆ. ಅದನ್ನು ಅನುಭವಿಸುವ ರೀತಿಯೂ ಬೇರೆ. ಅದನ್ನು ವ್ಯಕ್ತಪಡಿಸುವ ಭಾಷೆಯೂ ಬೇರೆ. ಹಾಗಾಗಿ ಒಬ್ಬರ ಮೌನವನ್ನು ಮತ್ತೊಬ್ಬರು ಖಾಲಿತನವೆಂದು ಅರ್ಥೈಸಬಹುದು. ಒಬ್ಬರ ಒಂಟಿತನವನ್ನು ಮತ್ತೊಬ್ಬರು ಅಹಂಕಾರವೆಂದು ಭಾವಿಸಬಹುದು. ಒಬ್ಬರ ಮಾತಿನ ಕೊರತೆಯನ್ನು ಮತ್ತೊಬ್ಬರು ನಿರ್ಲಕ್ಷ್ಯವೆಂದುಕೊಳ್ಳಬಹುದು.
ಆದರೆ ಆ ಮೌನದೊಳಗೆ ಒಂದು ಸಂಪೂರ್ಣ ಜಗತ್ತೇ ಅಡಗಿರಬಹುದು.
ಹುಟ್ಟಿನ ಹಿಂದೇನು? ಸಾವಿನ ನಂತರವೇನು? ನಾವು ಏಕೆ ಹುಟ್ಟುತ್ತೇವೆ? ಏಕೆ ಕೆಲವು ಜನರನ್ನು ಭೇಟಿಯಾಗುತ್ತೇವೆ? ಏಕೆ ಕೆಲವು ಸಂಬಂಧಗಳು ನಮ್ಮ ಬದುಕನ್ನು ಬದಲಿಸುತ್ತವೆ? ಏಕೆ ಕೆಲವು ಜನರು ಬಂದು ಹೋಗುತ್ತಾರೆ? ಏಕೆ ಕೆಲವು ನೆನಪುಗಳು ವರ್ಷಗಳಾದರೂ ನಮ್ಮೊಳಗೆ ಜೀವಂತವಾಗಿರುತ್ತವೆ?
ಈ ಪ್ರಶ್ನೆಗಳಿಗೆ ಬಹುಶಃ ಅಂತಿಮ ಉತ್ತರ ಯಾರ ಬಳಿಯೂ ಇಲ್ಲ. ಆದರೂ ನಾವು ಬದುಕುತ್ತೇವೆ. ಹೊಸ ಸಂಬಂಧಗಳನ್ನು ಕಟ್ಟುತ್ತೇವೆ...ಪ್ರೀತಿಸುತ್ತೇವೆ. ನೋಯುತ್ತೇವೆ. ಕ್ಷಮಿಸುತ್ತೇವೆ. ಮತ್ತೆ ನಂಬುತ್ತೇವೆ. ಮತ್ತೊಮ್ಮೆ ಒಡೆಯುತ್ತೇವೆ. ಕೊನೆಗೆ ಮೌನದ ಕಡೆಗೆ ಮರಳುತ್ತೇವೆ.
ಬಹುಶಃ ಮೌನ ಎಂದರೆ ಒಂಟಿತನವಲ್ಲ. ಮೌನವೆಂದರೆ ನಮ್ಮೊಳಗಿನ ನಮ್ಮನ್ನೇ ಕೇಳಿಸಿಕೊಳ್ಳುವ ಅವಕಾಶ. ಬಹುಶಃ ಒಂಟಿತನ ಎಂದರೆ ಯಾರೂ ನಮ್ಮೊಂದಿಗೆ ಇಲ್ಲ ಎಂಬುದಲ್ಲ. ನಮ್ಮೊಂದಿಗೆ ನಾವು ಇರುವುದನ್ನು ಕಲಿಯುವ ಸಮಯ.
ಮತ್ತು ಬಹುಶಃ ಭಾವನೆಗಳು ಮಾಯೆಯಾದರೂ, ಆ ಮಾಯೆಯೇ ಮನುಷ್ಯನ ಬದುಕನ್ನು ಬದುಕಾಗಿಸುತ್ತದೆ.
ಆದ್ದರಿಂದಲೇ—ಖಾಲಿ ಹೃದಯವೂ ಒಂದು ಕಥೆ ಹೇಳುತ್ತದೆ. ಮೌನವೂ ಒಂದು ಭಾಷೆ. ಒಂಟಿತನವೂ ಒಂದು ಪಯಣ. ಭಾವನೆಗಳೂ ಒಂದು ಮಾಯೆ.
ಆ ಮಾಯೆಯ ಆಚೆ ಏನಿದೆ?
ಬಹುಶಃ… ಅದನ್ನು ತಿಳಿಯಲು ಮತ್ತೊಂದು ಜನ್ಮ ಬೇಕಿರಬಹುದು.



Comments
Post a Comment