ಮಿಲೆನಿಯಲ್ಸ್ ಅಂತರಾಳ...


 



ಮಿಲೇನಿಯಲ್ಸ್ (Millennials) ಎಂದರೆ ಕೇವಲ ಒಂದು ತಲೆಮಾರಲ್ಲ; ಇವರು ಜಗತ್ತಿನ ಮಹಾ ಪಲ್ಲಟದ ಕಾಲಕ್ಕೆ ಸಾಕ್ಷಿಯಾದ ಅಪರೂಪದ ಜೀವಗಳು. ಚರಿತ್ರೆ ಇವರನ್ನು ೧೯೮೧ ರಿಂದ ೧೯೯೬ರ ನಡುವೆ ಜನಿಸಿದವರು ಎಂದು ಪರಿಚಯಿಸುತ್ತದೆ. ಆದರೆ ಇವರ ನಿಜವಾದ ಪರಿಚಯ ಎಷ್ಟು ಸುಂದರವಾಗಿದೆ ಗೊತ್ತಾ?

ಸಂಪ್ರದಾಯ ಮತ್ತು ತಂತ್ರಜ್ಞಾನ ಎಂಬ ಎರಡು ಯುಗಗಳನ್ನು ಜೋಡಿಸಿದ ಅಪರೂಪದ ಸೇತುವೆ ಮಿಲೇನಿಯಲ್ಸ್. ಅನಲಾಗ್ ಜಗತ್ತಿನ ಮುಗ್ಧತೆ ಮತ್ತು ಡಿಜಿಟಲ್ ಜಗತ್ತಿನ ಆಧುನಿಕತೆ ಎರಡನ್ನೂ ಸಮಾನವಾಗಿ ಅನುಭವಿಸಿದ ಏಕೈಕ ಪೀಳಿಗೆ. ಈ ಪರಿವರ್ತನಾ ಯುಗದ ಸಮತೋಲನವನ್ನು ಸಮದೂಗಿಸಿಕೊಂಡು ಜಗತ್ತಿನ ಈ ಪರಿವರ್ತನೆಯ ಸವಾಲಿಗೆ ಉತ್ತರವಾದಂತಹ ಪೀಳಿಗೆ ಮಿಲೇನಿಯಲ್ಸ್. ತಾಳ್ಮೆ ಇವರ ನಿಜವಾದ ಶಕ್ತಿ. ಒಂದು ಕಡೆ ಬೆಳಕಿಗಿಂತ ವೇಗವಾಗಿ ಓಡುತ್ತಿರುವ ಡಿಜಿಟಲ್ ತಂತ್ರಜ್ಞಾನ, ಇನ್ನೊಂದೆಡೆ ಬದುಕಿನಲ್ಲಿ ಬೇರೂರಿದ ಸಂಪ್ರದಾಯ. ಇವೆರಡರ ನಡುವೆ ಇಂದಿಗೂ ಸಮತೋಲನ ಕಾಪಾಡುತ್ತಿರುವ ಪೀಳಿಗೆ ಮಿಲೇನಿಯಲ್ಸ್.


ಮಿಲೇನಿಯಲ್ಸ್ ಬದುಕಿನ ಹಸಿರು ಮತ್ತು ಒಣ ಎರಡನ್ನೂ ಕಂಡವರು. ಇವರು ಬಾಲ್ಯದಲ್ಲಿ ಮುಸ್ಸಂಜೆಯ ಕತ್ತಲೆ, ಲೋಡ್ ಶೆಡ್ಡಿಂಗ್ ಮತ್ತು ಬೀದಿದೀಪದ ಕೆಳಗಿನ ಹರಟೆಯನ್ನು ನೋಡಿದ್ದಾರೆ. ಬೆಳೆಯುತ್ತಾ ಇಡೀ ಜಗತ್ತೇ ಮೊಬೈಲ್ ಪರದೆಯೊಳಗೆ ಅಡಗಿಕೊಳ್ಳುವ ಕ್ರಾಂತಿಯನ್ನೂ ನೋಡಿದ್ದಾರೆ. ಹಳೆಯ ಕಾಲದ ಸಂಸ್ಕೃತಿಯ ಸವಿಯೂ ಇವರಿಗಿದೆ, ಹೊಸ ಕಾಲದ ತಂತ್ರಜ್ಞಾನದ ಅರಿವೂ ಇವರಿಗಿದೆ. ಇವರು ಈ ಜಗದ ನಿಶ್ಶಬ್ದ ಹೋರಾಟಗಾರರು.




ಮಿಲೇನಿಯಲ್ಸ್ ಪ್ರಕೃತಿಯ ಜೊತೆಗೆ ಒಂದು ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಂತಹ ಪೀಳಿಗೆ. ಕಾಡು, ಮಳೆ, ನದಿ, ಮರ, ಪ್ರಾಣಿ-ಪಕ್ಷಿಗಳ ಜೊತೆ ಆಡಿಕೊಂಡು ಬಾಲ್ಯವನ್ನು ಕಳೆದವರು. ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಪುಸ್ತಕ, ಓದು-ಬರಹದ ಜೊತೆ ನಂಟನ್ನು ಹೊಂದಿದವರು. ಸಂಬಂಧಗಳನ್ನು ಆಳವಾಗಿ ನಂಬಿದ ಭಾವನಾಜೀವಿಗಳು. ಹಾಗೆಯೇ ಬೆಳೆಯುತ್ತ ತಂತ್ರಜ್ಞಾನವನ್ನು ಅಧ್ಯಯನ ಮಾಡಿದವರು.

ಜಗತ್ತು ಇವರನ್ನು ಮಂದಗತಿಯ ಪೀಳಿಗೆ ಎಂದು ಕರೆಯುತ್ತಿದೆ. ಇದಕ್ಕೆ ಕಾರಣ ಇವರ ಬದುಕಿನ ಪ್ರತಿಯೊಂದು ವಿಚಾರವೂ ನಿಧಾನಗತಿಯಲ್ಲಿ ಯಶಸ್ಸು ಕಾಣುತ್ತಿರುವುದು. ಹೌದು, ಒಳ್ಳೆಯ ಕೆಲಸಗಳು ಮತ್ತು ಬಲವಾದ ವಿಚಾರಗಳು ಯಶಸ್ವಿಯಾಗಲು ಸಮಯ ಬೇಕು. ಅಲ್ಲಿ ಅಡಿಪಾಯ ಭದ್ರವಾಗಬೇಕು. ಜೊತೆಗೆ ಎಲ್ಲ ವಿಚಾರಗಳು ಹಂತ ಹಂತವಾಗಿ ಗಟ್ಟಿಯಾಗಬೇಕು. ಈ ತರದ ಯಶಸ್ಸಿಗೆ ತಾಳ್ಮೆ ಮತ್ತು ಸಮಯವನ್ನು ವ್ಯಯಿಸುವುದು ಅನಿವಾರ್ಯ. ಇನ್ನೊಂದು ಸರ್ವಕಾಲಿಕ ಸತ್ಯವೆಂದರೆ ಬದುಕು ಕಾಲಕ್ಕೆ ತಕ್ಕ ಹಾಗೆ ಪ್ರತಿಫಲ ನೀಡುವುದು. ಇನ್ನೊಂದು, ಬದುಕು ವಿಧಿಲಿಖಿತ ಕೂಡ. ಇವೆಲ್ಲವುಗಳ ಜೊತೆಗೆ ಬದುಕು ನಮ್ಮ ಪ್ರಯತ್ನ ಹಾಗೂ ಬುದ್ಧಿವಂತಿಕೆಯ ಪ್ರತೀಕ ಕೂಡ. ಹಾಗಾಗಿ ಇಲ್ಲಿ ಯಾರು ಶೀಘ್ರ ಕ್ಷಿಪಣಿಗಳಲ್ಲ, ಮಂದಗತಿಯ ಆಮೆಗಳೂ ಅಲ್ಲ. ಅವರವರ ಕರ್ಮಾನುಸಾರ ವಿಧಿಲಿಖಿತ.


ಮಿಲೇನಿಯಲ್ಸ್ ಎಂದರೆ ತಮ್ಮ ೨೦ರ ಹರೆಯವನ್ನು ಕೇವಲ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಲ್ಲೇ ಕಳೆದವರು. ಹೊಂದಾಣಿಕೆ ಮತ್ತು ಸಮತೋಲನ ಇವೆರಡನ್ನು ಸಮದೂಗಿಸಿ ಬಾಳುವುದು ಅದೆಷ್ಟು ಕಷ್ಟ ಗೊತ್ತಾ? ಇವರ ಇಪ್ಪತ್ತರಿಂದ ಮೂವತ್ತೈದು ವರ್ಷಗಳು ಈ ಯುಗದ ಪರಿವರ್ತನೆಯನ್ನು ಸಮದೂಗಿಸುವುದರಲ್ಲೇ ಮುಗಿಯಿತು. ಜಗತ್ತಿನಲ್ಲಿ ಯಾವುದೇ ಒಂದು ಪರಿವರ್ತನೆ ಶುರುವಾದಾಗ ಅಲ್ಲಿ ಗೊಂದಲಗಳು ಶುರುವಾಗುವುದು ಅವುಗಳ ಪೂರ್ವಾಪರ ಮತ್ತು ಭವಿಷ್ಯವನ್ನು ಅರ್ಥ ಮಾಡಿಕೊಂಡವರಿಗೆ ಮಾತ್ರ. ಎಲ್ಲ ವಿಚಾರಗಳಲ್ಲಿ ಅನುಕೂಲ ಮತ್ತು ಅನನುಕೂಲಗಳು ಇರುವುದು ಸಾಮಾನ್ಯ. ಆದರೆ ಎರಡನ್ನೂ ಸರಿಯಾಗಿ ಅರ್ಥ ಮಾಡಿಕೊಂಡು ಅನುಕೂಲಗಳನ್ನು ಉನ್ನತಿಗಾಗಿ ಮತ್ತು ಅನನುಕೂಲಗಳನ್ನು ಅಭಿವೃದ್ಧಿಗಾಗಿ ಬಳಸಿದಾಗಲೇ ಆ ವಿಚಾರಕ್ಕೆ ಶಕ್ತಿ ಬರುವುದು. ಈ ಪರಿವರ್ತನಾ ಯುಗದಲ್ಲಿ ಈ ಶಕ್ತಿಯನ್ನು ಕೊಟ್ಟವರು ಮಿಲೇನಿಯಲ್ಸೇ.

ಸಮಾಜದ ಹಳೆಯ ಕಟ್ಟುಪಾಡುಗಳನ್ನು ಮುರಿದು, ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು (ಮದುವೆ, ವೃತ್ತಿ) ೩೫ ವರ್ಷದ ನಂತರ ತಮ್ಮದೇ ನಿಯಮಗಳ ಮೇಲೆ ಅತ್ಯಂತ ಗೌರವದಿಂದ ಆರಂಭಿಸಿದ ಸ್ವಾವಲಂಬಿಗಳು ಇವರು. ಸರಳವಾಗಿ ಹೇಳಬೇಕೆಂದರೆ, "ಹಳೆಯ ನೆನಪುಗಳ ಹೃದಯ ಮತ್ತು ಹೊಸ ತಂತ್ರಜ್ಞಾನದ ಮೆದುಳನ್ನು ಹೊಂದಿರುವ ಜಗತ್ತಿನ ಅತ್ಯಂತ ಸುಂದರ ಹಾಗೂ ಪ್ರಬುದ್ಧ ತಲೆಮಾರು ಎಂದರೆ ಅದು ಮಿಲೇನಿಯಲ್ಸ್."


ಮಿಲೇನಿಯಲ್ಸ್ ತಲೆಮಾರಿನವರು ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡವರು. ಇವರು ತಮ್ಮ ಬಾಲ್ಯವನ್ನು ಸಂಪೂರ್ಣವಾಗಿ ಸಾಂಪ್ರದಾಯಿಕ (Analog) ಜಗತ್ತಿನಲ್ಲಿ ಕಳೆದರು, ಆದರೆ ತಮ್ಮ ಯೌವನ ಮತ್ತು ವೃತ್ತಿಜೀವನವನ್ನು ಸಂಪೂರ್ಣವಾಗಿ ಡಿಜಿಟಲ್ (Digital) ಜಗತ್ತಿನಲ್ಲಿ ಎದುರಿಸಬೇಕಾಗಿ ಬಂತು. ಈ ಹಠಾತ್ ಬದಲಾವಣೆ ಅವರ ಮೇಲೆ ಭಾರಿ ಒತ್ತಡವನ್ನು ಉಂಟುಮಾಡಿತು.


ಮಿಲೇನಿಯಲ್ಸ್ ತಮ್ಮ ಬಾಲ್ಯದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳು, ಲೈಬ್ರರಿ ಪುಸ್ತಕಗಳು, ಕ್ಯಾಸೆಟ್‌ಗಳು, ವಿಸಿಡಿ (VCD) ಪ್ಲೇಯರ್‌ಗಳು ಮತ್ತು ಕಾಗದದ ನಕ್ಷೆಗಳನ್ನು (Maps) ಬಳಸುತ್ತಿದ್ದರು. ಮನೆಯಿಂದ ಹೊರಗೆ ಹೋದರೆ ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಇವರು ಹೈಸ್ಕೂಲ್ ಅಥವಾ ಕಾಲೇಜು ಮುಗಿಸುವಷ್ಟರಲ್ಲಿ ಸ್ಮಾರ್ಟ್‌ಫೋನ್‌ಗಳು, 4G ಇಂಟರ್ನೆಟ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳ ಹಠಾತ್ ಅಲೆ ಭಾರತಕ್ಕೆ ಅಪ್ಪಳಿಸಿತು. ಹಳೆಯ ಅಭ್ಯಾಸಗಳನ್ನು ಬಿಟ್ಟು ತಕ್ಷಣವೇ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಯಿತು.


ಮಿಲೇನಿಯಲ್ಸ್ ಶಾಲಾ-ಕಾಲೇಜುಗಳಲ್ಲಿ ಪೆನ್, ಪೇಪರ್ ಮತ್ತು ಪುಸ್ತಕಗಳ ಮೂಲಕವೇ ಸಾಂಪ್ರದಾಯಿಕವಾಗಿ ಕಲಿತರು. ಆದರೆ ಅವರು ಕೆಲಸಕ್ಕೆ ಸೇರುವ ಹೊತ್ತಿಗೆ ಇಡೀ ಕಚೇರಿಗಳು ಕಂಪ್ಯೂಟರೀಕರಣಗೊಂಡವು. ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳು "ನೀವು ಯುವಕರು, ನಿಮಗೆ ತಂತ್ರಜ್ಞಾನ ಬೇಗ ಅರ್ಥವಾಗುತ್ತದೆ" ಎಂಬ ಕಾರಣಕ್ಕೆ ಎಲ್ಲಾ ಡಿಜಿಟಲ್ ಕೆಲಸಗಳನ್ನು ಇವರ ಮೇಲೆಯೇ ಹಾಕಿದರು. ಯಾವುದೇ ಮುಂಚಿನ ತರಬೇತಿ ಇಲ್ಲದೆ ಕಠಿಣ ಸಾಫ್ಟ್‌ವೇರ್‌ಗಳನ್ನು ಇವರು ಸ್ವಂತವಾಗಿ ಕಲಿಯಬೇಕಾಯಿತು. ಸಾಂಪ್ರದಾಯಿಕ ಉದ್ಯೋಗ ಮಾರುಕಟ್ಟೆಯನ್ನು ನಂಬಿ ಓದಿದ ಇವರಿಗೆ, ಇದ್ದಕ್ಕಿದ್ದಂತೆ ಆಟೊಮೇಷನ್ (Automation) ಮತ್ತು ಐಟಿ (IT) ಆಧಾರಿತ ಹೊಸ ಆರ್ಥಿಕತೆಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಿತ್ತು.


ಹಳೆಯ ಕಾಲದಲ್ಲಿ ಕೆಲಸದ ಸಮಯ ಮುಗಿದರೆ ನೆಮ್ಮದಿ ಇರುತ್ತಿತ್ತು. ಆದರೆ ಸ್ಮಾರ್ಟ್‌ಫೋನ್ ಮತ್ತು ಇಮೇಲ್ ಕ್ರಾಂತಿಯಿಂದಾಗಿ, ಕಚೇರಿ ಸಮಯ ಮುಗಿದರೂ ಬಾಸ್‌ಗಳು ಅಥವಾ ಮ್ಯಾನೇಜರ್‌ಗಳು ಇವರನ್ನು ಸಂಪರ್ಕಿಸಲು ಶುರು ಮಾಡಿದರು. ಇದರಿಂದಾಗಿ ಇವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಗೆರೆ ಅಳಿಸಿಹೋಗಿ ತೀವ್ರ ಮಾನಸಿಕ ಒತ್ತಡ ಶುರುವಾಯಿತು. ಇದು ಅವರ ವೈಯಕ್ತಿಕ ಬದುಕಿನ ಮೇಲೆ ಗಾಢ ಪರಿಣಾಮ ಬೀರಿತು. ಒಂದೆಡೆ ಸಂಪ್ರದಾಯ, ಸಂಸ್ಕಾರವೆನ್ನುವ ಹಿರಿಯರು; ಇನ್ನೊಂದೆಡೆ ತಂತ್ರಜ್ಞಾನದ ಜೊತೆ ಓಡುತ್ತಿರುವ ಕಿರಿಯರು. ಇವೆರಡರ ನಡುವೆ ಸ್ಯಾಂಡ್ವಿಚ್ ಆದರೂ ತಮ್ಮ ಜವಾಬ್ದಾರಿ ಮತ್ತು ಗುರಿಯನ್ನು ಮರೆಯದವರು ಇವರು.


ಇವೆಲ್ಲವುಗಳ ನಡುವೆ ಅವರ ಒದ್ದಾಟ ನೋಡಿ ಕುಹಕವಾಡುವ ಸಮಾಜ. "ವಯಸ್ಸು ಮೀರಿದೆ, ಮದುವೆಯಿಲ್ಲ, ಸರಿಯಾದ ಹಣಕಾಸು ವ್ಯವಸ್ಥೆಯಿಲ್ಲ, ಬದುಕಿಗೆ ಅರ್ಥವೇ ಇಲ್ಲ..." ಇನ್ನೂ ಹತ್ತು ಹಲವಾರು ಟೀಕೆಗಳು. ಇವರ ನಂತರದ ತಲೆಮಾರು ಜನರೇಶನ್ ಜೆಡ್ ತಂತ್ರಜ್ಞಾನದ ಜೊತೆ ಬೆರೆತು ಮಿಂಚಿನ ವೇಗದಲ್ಲಿ ಬದುಕು ಕಟ್ಟಿಕೊಂಡರು. ಇದು ಇವರನ್ನು ಟೀಕಿಸಲು ಇನ್ನೊಂದು ಆಯುಧ ಸಿಕ್ಕಂತಾಯಿತು. ಆದರೆ ನಿಜ ಏನು ಗೊತ್ತಾ? ಇಂದಿಗೂ ಸಂಪ್ರದಾಯ ಹಾಗೂ ತಂತ್ರಜ್ಞಾನವನ್ನು ಸಮದೂಗಿಸಿ ಒಂದು ಆರೋಗ್ಯವಂತ ಜಗತ್ತನ್ನು ಕೊಡುಗೆಯಾಗಿ ನೀಡಲು ಶ್ರಮಿಸುತ್ತಿರುವ ಪೀಳಿಗೆ ಮಿಲೇನಿಯಲ್ಸ್.


ಇವರು ಬಾಲ್ಯದಲ್ಲಿ ಗಂಟೆಗಟ್ಟಲೆ ಕಾದು ಹಸಿವನ್ನು ನುಂಗಿ ಆಹಾರವನ್ನು ಪಡೆದವರು. ಕಟ್ಟಿಗೆ ಒಲೆ, ರುಬ್ಬುವ ಕಲ್ಲು—ಇವೆಲ್ಲ ಕೆಲಸ ಮುಗಿಸಲು ಗಂಟೆಗಳೇ ಬೇಕಿತ್ತು. ಹಾಗಾಗಿ ತಾಳ್ಮೆಯಿಂದ ಕಾಯುವುದರ ಮಹತ್ವ ಇವರಿಗೆ ಬಾಲ್ಯದಲ್ಲೇ ಕರಗತವಾಗಿತ್ತು. ಆದ್ದರಿಂದ ಈ ಸಮತೋಲನಕ್ಕಾಗಿ ಕೆಲಸ ಮಾಡುವ ಶಕ್ತಿ ಇವರಿಗೆ ಒಲಿದು ಬಂತು. ಬದುಕು ಅದೆಷ್ಟೇ ಪೆಟ್ಟು ನೀಡಿದರೂ ಕ್ಯಾರೆ ಎನ್ನದೆ ಗಟ್ಟಿಯಾಗಿ ನಿಂತವರು ಇವರು.


ಹಾಗಾಗಿ ಮಿಲೇನಿಯಲ್ಸ್ ಜೀವನ (ಮದುವೆ ಸೇರಿದಂತೆ) ೩೫ ವರ್ಷದ ನಂತರವೇ ನಿಜವಾಗಿ ಆರಂಭವಾಗುತ್ತದೆ. ಹಳೆಯ ತಲೆಮಾರಿನವರು (Baby Boomers) ತಮ್ಮ ೨೦–೨೨ನೇ ವಯಸ್ಸಿಗೇ ಮದುವೆಯಾಗಿ ಸೆಟಲ್ ಆಗುತ್ತಿದ್ದರು. ಆದರೆ ಮಿಲೇನಿಯಲ್ಸ್ ವಿಷಯದಲ್ಲಿ ಈ ಹಳೆಯ ನಿಯಮಗಳೆಲ್ಲಾ ಉಡೀಸ್ ಆಗಿವೆ. ಅವರ ನಿಜವಾದ ವೈಯಕ್ತಿಕ ಸ್ವಾತಂತ್ರ್ಯ, ವೃತ್ತಿಜೀವನದ ಸ್ಥಿರತೆ ಮತ್ತು ಮದುವೆಯಂತಹ ಪ್ರಮುಖ ನಿರ್ಧಾರಗಳು ಈಗ ೩೦ರ ದಶಕದ ಕೊನೆಗೆ, ಅಂದರೆ ೩೫ ವರ್ಷದ ಆಸುಪಾಸಿಗೆ ತಲುಪಿವೆ. ಇದಕ್ಕೆ ಕಾರಣಗಳು ಇವೆ. ಅವೆಲ್ಲವುಗಳನ್ನು ಮುಂದಿನ ಬ್ಲಾಗ್‌ನಲ್ಲಿ ನೋಡೋಣ...




(ಮುಂದುವರಿಯುವುದು..)

Comments

Popular posts from this blog

ಈ ಜಗದಲಿ ನಾನ್ಯಾರು?

ಭಾವಗಳ ಬಚ್ಚಿಟವನು...

ಮಾತು ಮರೆತವರು..