ಬದುಕ ತೆರೆಯ ಹಿಂದಿನ ಕಥೆಯ ವ್ಯಥೆಗಳು.
ಈ ಜಗತ್ತು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಹಲವಾರು ಕಥೆಗಳನ್ನು ಹೇಳುತ್ತೆ. ಅವಳು ಹಾಗಂತೆ, ಅವನು ಹೀಗಂತೆ, ಕೆಲವೊಬ್ಬರಿಗೆ ಅಯ್ಯೋ ಅನ್ನುತ್ತೆ, ಇನ್ನೂ ಕೆಲವರನ್ನು ಗೇಲಿ ಮಾಡುತ್ತದೆ. ಮತ್ತೆ ಕೆಲವರನ್ನು ಟೀಕೆ ಮಾಡುತ್ತದೆ. ಹಾಗೆಯೇ ಕೆಲವೊಬ್ಬರ ಕಥೆಗಳನ್ನು ಹಾಸ್ಯ ಕೂಡ ಮಾಡುತ್ತದೆ. ಇದು ಜಗದ ನಿಯಮ, ಜನರ ನಿಯಮ. ಬದಲಾಯಿಸಲಾಗದಂತಹ ಒಂದು ವಿಷಯ.ಇದು ಕೇವಲ ಜಗದ ಊಹೆಯ ಪ್ರಕಾರ ಯಾರದೋ ಒಬ್ಬರ ಬದುಕು.ಇಂತಹ ಗಾಳಿಸುದ್ದಿಗಳು ಸದ್ದು ಮಾಡುವಾಗ ಪ್ರತಿ ಮನೆಯ ಗೋಡೆಗೂ ಕಿವಿಯಿರುತ್ತದೆ. ಯಾಕೆಂದರೆ ಊಹಾ ಪೋಹಗಳು ನೖಜ್ಯತೆಗಿಂತ ಬಹಳ ಸುಂದರವಾಗಿರುತ್ತದೆ.ಆದರೆ ನಿಜವೇನೆಂದರೆ ಬದುಕು ಯಾರಿಗೂ ಸುಲಭ ಇಲ್ಲ ಇಲ್ಲಿ. ಬದುಕಿನ ಕಷ್ಟಗಳ ಬಿಗಿ ಎಲ್ಲರಿಗೂ ಉರುಳಾಗಿ ಉಸಿರ ಬಿಗಿಯುತಿರುತ್ತದೆ. ಇಲ್ಲಿ ಯಾರ ಬದುಕು ಕೂಡ ನಾವು ಊಹಿದಷ್ಟು ಸುಲಭವಾಗಿಲ್ಲ.
ಆದರೆ ಇವೆಲ್ಲವನ್ನು ಬಿಟ್ಟು ಪ್ರತಿಯೊಬ್ಬನಿಗೂ ಒಂದು ಬದುಕಿನ ಕಥೆ ಇರುತ್ತದೆ. ಆ ಕಥೆಯಲ್ಲಿ ಈ ಕಟ್ಟುಕಥೆಯ ತರಹ ವ್ಯಂಗ್ಯ, ಹಾಸ್ಯ, ಟೀಕೆ, ಇದ್ಯಾವುದು ಇರುವುದಿಲ್ಲ. ಒಂದಿಷ್ಟು ಖುಷಿಯ ವಿಚಾರಗಳು ಹಾಗೆಯೇ ಒಂದಷ್ಟು ಕಹಿಯ ನೋವುಗಳು ಅಷ್ಟೇ.. ಇವುಗಳನ್ನು ಆಲಿಸುವವರು ಬಹಳ ಕಡಿಮೆ. ಮೊದಲಿಗೆ ಕೆಲವರು ಕೇಳಬಹುದು. ನಂತರ ಈ ವಿಚಾರಗಳು ಸಪ್ಪೆ ಮತ್ತು ಬೇಸರವೆನಿಸುತ್ತದೆ. ಯಾಕೆಂದರೆ ಈ ಜಗತ್ತು ಮನರಂಜನೆಯನ್ನು ಬಯಸುತ್ತದೆ ಹೊರತು ಸತ್ಯವನ್ನಲ್ಲ.
ಈ ಜಗತ್ತಿನಲ್ಲಿ ಪ್ರತಿಯೊಬ್ಬನ ಮನುಷ್ಯನ ಬದುಕು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಈಗಿರುವ ಖುಷಿ ಮತ್ತೆ ಇರಲಾದರು. ನಿನ್ನೆಯ ದುಃಖ ಈಗ ಮರೆಯಾಗಿರಬಹುದು. ಕಾಲ ಬದಲಾದಂತೆ ಬದುಕು ಬದಲಾಗುತ್ತದೆ. ಇದರ ಜೊತೆಗೆ ಮನುಷ್ಯನೂ ಬದಲಾಗುತ್ತ ಹೋಗುತ್ತಾನೆ. ಈಗ ಖುಷಿಯಾಗಿರುವವನಿಗೆ ನೋವಿನಲ್ಲಿರುವವನ ವೇದನೆ ಬೇಡ. ನೋವಿನಲ್ಲಿರುವವನಿಗೆ ಜಗದ ಖುಷಿಯೂ ಬೇಡ. ಅವರವರ ನೋವು ನಲಿವು ಕೇವಲ ಅವರವರಿಗೆ ಸ್ವಂತವಾಗಿರುತ್ತದೆ.
ಆದರೆ ಈ ಜಗತ್ತಿನ ತೆರೆಯ ಮೇಲೆ ಅವರಿವರ ಊಹಾಪೋಹಗಳ ಮೇರೆಗೆ ನಮ್ಮ ಬದುಕು ಅಬ್ಬರದಿಂದ ಓಡುತ್ತಿರುವಾಗ ತೆರೆಯ ಮರೆಯಲ್ಲಿ ಬದುಕಿನ ನೖಜ್ಯ ಚಿತ್ರಣ ಮೌನವಾಗಿ ನಮ್ಮೊಳಗೆ ಸಮರಗೖಯ್ಯುತಿರುತ್ತದೆ.ಗೊಂದಲ ನೋವು, ನಲಿವು, ಒಲವು ಹೀಗೆ ಹತ್ತು ಹಲವಾರು ಭಾವನೆಗಳ ಬದಲಾವಣೆ ಬದುಕನ್ನು ಕಿತ್ತು ತಿನ್ನುತಿರುತ್ತದೆ.ಜವಬ್ದಾರಿಯ ಭಾರ ಬದುಕನ್ನು ಕುಗ್ಗಿಸುತಿರುತ್ತದೆ. ಮರುಭೂಮಿಗೆ ಮಳೆ ಸುರಿದಂತೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದು ಕಡೆ ಖುಷಿ, ನಲಿವು, ಸುಖ ಇವೆಲ್ಲ ಬದುಕನ್ನು ಸ್ಪರ್ಶಿಸಿ ಮತ್ತೆ ಗಗನಕುಸುಮವಾಗುತ್ತದೆ.ಆದರೆ ಇದರಾಳ ಅಗಲ ಅರಿಯದ ಜಗತ್ತಿಗೆ ನಾವು ಮರ್ಯಾದೆ ಪ್ರತಿಷ್ಠೆಯ ಹೆಸರಲ್ಲಿ ಮರೆಮಾಚುವ ನೋವು ಕಾಣದೆ ಕಾಣಸಿಗುವ ಕೇವಲ ಅರ್ಧ ಸತ್ಯದ ಆಧಾರದ ಮೇಲೆ ಜಗದ ತೆರೆಯ ಮೇಲೆ ನಮ್ಮ ಮೇಲೊಂದು ಕಥೆ ಬರೆದು ಪ್ರದರ್ಶನ ಮಾಡಲು ಶುರು ಮಾಡುತ್ತದೆ.
ಗಾಳಿ ಸುದ್ದಿಗಳು... ಮೊದಲೆಲ್ಲ ಇವು ಮನುಷ್ಯನ ಮಾತಿನಲ್ಲಿ ಹರಡುವ ಒಂದು ವಿಚಾರವಾಗಿತ್ತು. ಆದರೆ ಇವುಗಳಿಗೆ ಯಾವುದೆ ತಲೆ ಬುಡ ಇಲ್ಲದ ಕಾರಣ ಇವುಗಳನ್ನು ಗಾಳಿ ಸುದ್ದಿ ಎಂದು ಕರೆಯುತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಅವುಗಳು ಲಿಖಿತ ರೂಪದಲ್ಲೂ ಅಂತರ್ಜಾಲದ ಸಂವಹನ ಮಾಧ್ಯಮಗಳ ಮೂಲಕ ಸದ್ದು ಮಾಡುತಿರುವುದು ವಿಷಾದನೀಯ ವಿಚಾರ. ಯಾವುದೇ ಒಂದು ವಿಷಯ ಯಾವಾಗ ಬರವಣಿಗೆಯ ರೂಪ ತಾಳುತ್ತದೆಯೋ ಅದು ಎಂದಿಗೂ ಅಳಿಸಲಾಗದ ದಾಖಲೆಯಾಗಿ ಬದಲಾಗುತ್ತದೆ. ತಲೆ ಬುಡ ಇಲ್ಲದ ವಿಷಯಗಳು ಯಾರೋ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಲಿಖಿತ ರೂಪದಲ್ಲಿ ಶಾಶ್ವತವಾಗುತ್ತದೆ ಎಂದರೆ ಜಗತ್ತಿನಲ್ಲಿ ನೖಜ್ಯತೆ ಸಾಯುವ ಹಂತಕ್ಕೆ ಬಂದಿದೆ ಎಂಬುದರ ಸಂಕೇತವಲ್ಲವೇ? ಮನುಷ್ಯ ಬದುಕಿನ ಮೌಲ್ಯಗಳನ್ನು ಸಾಯಿಸಿ ಶೋಕಿಯ ಭ್ರಮೆಯಲ್ಲಿ ಬಾಳ ಹೊರಟು ನೆಮ್ಮದಿಯ ಹುಡುಕಾಡಿದರೆ ಸಿಗಲು ಸಾಧ್ಯವೇ?ಹಣ ನಮಗೆ ಸುಖ ವೖಭೋಗವನ್ನು ನೋಡಬಹುದು. ಆದರೆ ಆತ್ಮ ತೃಪ್ತಿಗೆ ಮಾತ್ರ ನೆಮ್ಮದಿಯನ್ನು ನೀಡಲು ಸಾಧ್ಯ. ಅದು ದುಡ್ಡಿನಿಂದ ಗಳಿಸುವ ವಸ್ತುವಲ್ಲ. ಕರ್ಮದಿಂದ ಗಳಿಸುವ ಪುಣ್ಯ.
ನಿಜವಾಗಿ ನೋಡಿದರೆ, ನಾವು ಯಾವಾಗ ಇನ್ನೊಬ್ಬ ವ್ಯಕ್ತಿಯನ್ನು ಆಳವಾಗಿ ಅರ್ಥ ಮಾಡಿಕೊಂಡು ಅವರ ಬದುಕಿನ ಭಾಗವಾಗುತ್ತೇವೆಯೋ, ಅಲ್ಲಿ ನಾವು ಕಲಿಯೋದು ಬಹಳಷ್ಟು ವಿಷಯಗಳಿರುತ್ತದೆ. ಒಬ್ಬ ವ್ಯಕ್ತಿ ನಮ್ಮೊಂದಿಗೆ ನಂಬಿಕೆಯಿಂದ ಅವರ ಬದುಕನ್ನು ಹಂಚಿಕೊಳ್ಳುತ್ತಿದ್ದಾನೆ ಎಂದಾಗ ಆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಕ್ಕೆ ವಿಶ್ವಾಸ ಎಂದು ಹೆಸರು. ಅದೇ ಸಂಬಂಧಗಳಿಗೆ ಬುನಾದಿ. ಆದರೆ ಬಹಳಷ್ಟು ಜನ ಅದರ ಪರಿವೆ ಇಲ್ಲದೇ ಒಂದೋ ಆತನನ್ನು ಟೀಕಿಸಲು ಶುರು ಮಾಡುತ್ತಾರೆ. ಇಲ್ಲವಾದರೆ ಅದಕ್ಕೊಂದಷ್ಟು ಮಸಾಲೆ ಹಾಕಿ ಆ ವಿಷಯವನ್ನು ಸುದ್ದಿ ಮಾಡಿ ಜಗವೆಲ್ಲ ಸದ್ದಾಗುವಂತೆ ಮಾಡುತ್ತಾರೆ.ಇದರಿಂದ ಕಲಿಯುವುದು ಏನಿದೆ? ಯಾವುದೇ ಒಂದು ವಿಚಾರ ಜಗತ್ತಿನಲ್ಲಿ ಎಷ್ಟು ಸುದ್ದಿಯಾಗಿದೆ ಅನ್ನುವುದಕ್ಕಿಂತ ನಮಗೆಷ್ಟು ಅರ್ಥವಾಗಿದೆ ಎಂಬುದು ಬಹಳ ಮುಖ್ಯ. ಹಾಗೆಯೇ ಒಬ್ಬ ವ್ಯಕ್ತಿ ಜಗತ್ತಿಗೆ ಎಷ್ಟು ಒಳ್ಳೆಯವನು ಅನ್ನುವುದಕ್ಕಿಂತ ಆತ ಹಾಗೂ ನಮ್ಮ ನಡುವಿನ ಭಾಂಧವ್ಯ ಎಷ್ಟು ಬಲವಾಗಿದೆ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ನಮ್ಮ ಕಷ್ಟಗಳಿಗೆ ಹೆಗಲಾಗುವವರು ನಮಗೆ ಪ್ರಮಾಣಿಕವಾಗಿರವರರು ಹೊರತು ಜಗತ್ತಿಗೆ ಒಳ್ಳೆವವರಾಗಿರುವವರು ಅಲ್ಲ. ಯಾಕೆಂದರೆ ಇಲ್ಲಿ ಯಾರಿಗೂ ಜಗದ ಕಷ್ಟ ಕೇಳಿ ಜಗವನ್ನು ಸರಿಪಡಿಸುವಷ್ಟು ಆಯಸ್ಸು ಇಲ್ಲ. ಹಾಗಾಗಿ ನಮ್ಮ ಸುತ್ತ ಇರುವ ಕೆಲವೇ ಕೆಲವು ಸಂಬಂಧಗಳನ್ನಾದರೂ ಪ್ರಾಮಾಣಿಕವಾಗಿ ಗೌರವಿಸುವುದು ಬಹಳ ಮುಖ್ಯ.ನೀವು ಬೇರೆಯವರ ಬಗ್ಗೆ ಸುದ್ದಿ ಮಾಡಬೇಕೆನಿಸಿದರೆ ಅವರ ನೋವುಗಳನ್ನು ಅಥವಾ ತಪ್ಪುಗಳನ್ನು ಹಾಸ್ಯವಾಗಿ ಹಂಚಿಕೊಳ್ಳುವ ಬದಲು ಬದುಕಿನ ಚಂದದ ವಿಷಯಗಳನ್ನು ಅಂದವಾಗಿ ತೆರೆದಿಡಿ.
ಮೊದಲೆಲ್ಲ ಈ ಜಗದಲ್ಲಿ, ಸಾಧಕರ ಬದುಕಿನ ನಿಜವಾದ ಚಿತ್ರಣ ಅದೆಷ್ಟೋ ಜನರಿಗೆ ಮಾದರಿಯಾಗಿರುತಿತ್ತು. ಅವರು ಬೆಳೆದು ಬಂದ ದಾರಿ, ಪರಿಸ್ಥಿತಿಗಳನ್ನು ಎದುರಿಸಿದ ನೀತಿ, ಅವರ ಧೖರ್ಯ ಕಷ್ಟ ಸಹಾಸ ಅಸ್ಸಾಯಕತೆ, ನಿರಾಸೆ ನೋವು ಇವೆಲ್ಲವೂ ಸ್ಪೂರ್ತಿ ಎನಿಸುತಿತ್ತು.ಯಾಕೆಂದರೆ ಈಗ ದುಡ್ಡಿನಿಂದ ಅಳೆಯುವ ಒಬ್ಬ ವ್ಯಕ್ತಿಯ ಗೌರವ ಆಗ ವ್ಯಕ್ತಿತ್ವದಿಂದ ಅಳೆಯಲಾಗುತಿತ್ತು. ಆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಆತ ಅನುಭವಗಳ ಜೊತೆ ಬೆಂದು ಮಾಗಬೇಕಿತ್ತು.ಹಾಗೆಯೇ ಆಗ ಒಬ್ಬ ಮನುಷ್ಯನಿಗೆ ಪ್ರತಿ ಕಷ್ಟ ಹಾಗ ಕರ್ಮಗಳಿಗೆ ಇನ್ನೊಬ್ಬ ಮನುಷ್ಯ ಸಹಾಯಕನಾಗುತಿದ್ದ.ಈಗ ಯಂತ್ರ ತಂತ್ರಗಳು ಸಹಾಯ ಮಾಡುತಿದೆ.ಈಗ ಕೇವಲ ದುಡ್ಡಿದ್ದರೆ ಸಾಕು. ಎಲ್ಲವನ್ನು ಕೊಂಡುಕೊಳ್ಳಬಹುದು ಎಂಬ ಜಾಯಮಾನದಲ್ಲಿ ಬದುಕಿರುವವರೆ ಹೆಚ್ಚು.
ಈಗೀಗ ಜನರಿಗೆ ಎಲ್ಲವೂ ಮನರಂಜನೆಯಾಗಿದೆ.. ಯಾಕೆಂದರೆಈ ಡಿಜಿಟಲ್ ಯುಗದಲ್ಲಿ ಸಂಪಾದನೆ ಮಾರ್ಗ ಸುಲಭವಾಗಿದೆ.ಹಾಗಿಗಿ ಬದುಕು ಭಾವನೆ, ಮೌಲ್ಯಗಳು ಅಗ್ಗವಾಗಿದೆಆಗ ಜೀವನ ಶೖಲಿ ಕಷ್ಟಕರವಾಗಿತ್ತು ಮಾನವೀಯತೆಗೆ ಬೆಲೆ ಇತ್ತು. ಇಂದು ಬದುಕು ಸುಲಭವಾಗಿದೆ. ಮಾನವೀಯತೆ ಮರೆಯಾಗಿ ಶೋಕಿ, ಪ್ರತಿಷ್ಠೆ, ಮೆರೆಯುವ ಕಾಲವಿದು. ಇಲ್ಲಿ ಸಾಧಕನಿಗಿಂತ ಭಾಧಕರೆ ಹೆಚ್ಚು ಮೆರೆಯುತಿದ್ದಾರೆ. ಮನುಷ್ಯನ ಕಷ್ಟ ಕಣ್ಣೀರು ಕಾಲ ಕಸವಾಗಿ ದುಡ್ಡು ದವಲತ್ತೆ ಕಿರೀಟವಾಗಿದೆ.ಹಾಗಾಗಿ ಕಂಡವರ ಜೀವನದ ವ್ಯಥೆ ಕೇವಲ ಪ್ರಚಾರಕ್ಕೆ ಬಳಸುವ ಒಂದು ವಾಹಕವಾಗಿದೆ.
ಕಷ್ಟ ಗಳು ತಮಗೆ ಬಂದಾಗ ಕರಗಿ ಕೊರಗುವವರು ಬೇರೆಯವರಿಗೆ ಬಂದಾಗ ಅದು ನಾಟಕೀಯವೆನಿಸುತ್ತದೆ. ತಮ್ಮಲ್ಲಿ ಸಾವಿರ ದೋಷಗಳಿದ್ದರೂ ಬೇರೆಯವರ ನಡತೆ, ಗುಣ ಬದುಕು ಎಲ್ಲದರಲ್ಲೂ ಒಡಕು ಹುಡುಕಿ ಅಪವಾದಗಳ ಮೂಟೆಯನ್ನೆ ಅವರ ಮೇಲೆ ಹೊರಿಸುತ್ತಾರೆ.ತಮ್ಮ ಬದುಕಿನ ಸುಡು ಬೇಸಿಗೆಯ ತಾಪದಲ್ಲೂ ಬೇರೆಯವರ ಬದುಕಿಗೆ ಬೆಂಕಿ ಇಡುವ ವಿಚಿತ್ರ ಮನಸ್ಥಿತಿಗಳು ಬಹಳಷ್ಟು ಇವೆ. ಅನ್ಯಾಯ ಅತ್ಯಾಚಾರ ಅನಾಚಾರಗಳು ಭಯದ ಪರೀಧಿಯನ್ನು ದಾಟಿ ರಾಜ ರೋಷವಾಗಿ ಜಗದ ತುಂಬಾ ಮೆರವಣಿಗೆ ಹೋಗುತ್ತಿದೆ.ಇದ್ಯಾವುದರ ಪರಿವೆ ಇಲ್ಲದ ಜಗತ್ತು ಅವರಿವರ ಬದುಕಿಗೆ ಕಾಲ್ಪನಿಕ ಕಥೆ ಬರೆಯುವುದರಲ್ಲಿ ಮಗ್ನವಾಗಿದೆ ಎಂದರೆ ಬೇಸರದ ವಿಷಯವಲ್ಲವೆ?
ಯಾರದೋ ಬದುಕಿನ ಬಗ್ಗೆ ಕಥೆ ಬರೆಯುವ ಮುನ್ನ ಒಂದು ವಿಚಾರವನ್ನು ಬಹಳ ಆಳವಾಗಿ ಯೋಚಿಸಿ ಬರೆಯಿರಿ. ಆ ನಿಮ್ಮ ಕಾಲ್ಪನಿಕ ಕಥೆ ಆ ವ್ಯಕ್ತಿಯ ಚಾರಿತ್ರ್ಯ ಕೆಡಿಸಬಹುದೆ? ಅಥವಾ ಆ ನಿಮ್ಮ ಕಾಲ್ಪನಿಕ ಅಪ ಪ್ರಚಾರ ಆ ವ್ಯಕ್ತಿಯ ಬದುಕನ್ನು ಕೆಡಿಸಬಹುದೇ? ಎಂದು. ಒಂದು ವೇಳೆ ನಿಮ್ಮ ಉದ್ದೇಶ ಅವರ ಬದುಕನ್ನು ಕೆಡಿಸುವುದೇ ಆದರೆ "ಆ ಕ್ಷಣಕ್ಕೆ ಆ ವ್ಯಕ್ತಿ ನಿಮ್ಮ ಕುತಂತ್ರದಿಂದ ಸೋಲಬಹುದು. ಆದರೆ ಆ ಕೆಡುಕಿನ ಬಾಣ ಮುಂದೊಂದು ದಿನ ನಿಮ್ಮ ಕಡೆಗೆ ತಿರುಗಿ ಬದುಕಿನ ಬೇರನ್ನೆ ಗೆದ್ದಲು ಹಿಡಿಸಿ ನಾಶ ಮಾಡುವುದರಲ್ಲಿ ಸಂಶಯವಿಲ್ಲ.ಯಾಕೆಂದರೆ ನಿರಪರಾಧಿಯ ಕಣ್ಣೀರಿನ ಬಿಸಿ ಬೆಂಕಿಯನ್ನು ಮೀರಿ ಸುಡುತ್ತದೆ.
ನಿಮ್ಮ ಬದುಕನ್ನು ಯಾರ ಜೊತೆನೂ ಹೋಲಿಸಿ ಅವರಿವರ ಜೊತೆ ಸ್ಪರ್ಧೆಗಿಳಿಯುವ ಬದಲು ನಿಮ್ಮ ಬದುಕನ್ನು ಶೋಧಿಸಿ ಸ್ವಚ್ಛವಾಗಿಡಿ. ಶುದ್ದತೆ ಚಂದದ ಮೊದಲ ಭಾಗ. ನಂತರ ನೀವಂದುಕೊಂಡ ಹಾಗೆ ನಿಮ್ಮ ಬುದ್ದಿ ಕೌಶಲ ಉಪಯೋಗಿಸಿ ಸಿಂಗರಿಸಿ. ಅದನ್ನು ಅವರಿವರು ಮೆಚ್ಚಲಿ ಬಿಡಲಿ, ಅದು ನೀವು ಮೆಚ್ಚುವಂತಿದ್ದರೆ ಸಾಕು ಮೊದಲಿಗೆ. ನಾವು ಯಾವಾಗ ನಮ್ಮ ಬದುಕನ್ನು ಬದುಕಲು ಶುರು ಮಾಡುತ್ತೇವೆಯೋ, ಅಂದಿನಿಂದ ನಮಗೆ ಅವರಿವರ ಚಿಂತೆ ಕಾಡುವುದಿಲ್ಲ. ಹಾಗೆಯೇ ನಮ್ಮ ಬದುಕು ಸುಂದರವಾಗಿಯೇ ಸಾಗುತ್ತದೆ. ಹಾಗೆಯೇ ಬೇರೆಯವರಿಗೆ ತೊಂದರೆ ಕೊಡುವ ಮನಸ್ಸು ಬರುವುದಿಲ್ಲ. ಆದ್ದರಿಂದ ಈ ಜಗತ್ತಿನಲ್ಲಿ ಪ್ರತಿ ಮನುಷ್ಯನು ಅವನ ಬದುಕಿನಲ್ಲಿ ಪೂರ್ತಿಯಾಗಿ ಮುಳುಗಿದರೆ ಅದೆಷ್ಟೋ ಸಾಮಾಜಿಕ ಸಮಸ್ಯೆಗಳು ಕಡಿಮೆಯಾಗಿ ಜಗತ್ತು ಸ್ವಲ್ಪ ಮಟ್ಟಿಗೆ ಸ್ವಚ್ಛವಾಗಬಹುದು.



Comments
Post a Comment