ಇರುವುದೆಲ್ಲವ ಬಿಟ್ಟು....
"ಏನೆಂದೂ ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ"
ಮನುಷ್ಯನ ಬದುಕಿನಲ್ಲಿ ಆಸೆಯು ಎಂದಿಗೂ ನಿಲ್ಲದ ಒಂದು ನಿರಂತರ ಪ್ರಕ್ರಿಯೆ. ಈ ಬಗ್ಗೆ ಡಾ. ರಾಜಕುಮಾರ್ ಅವರು ಹಾಡಿರುವ ಮೇಲಿನ ಸಾಲುಗಳು ಅಕ್ಷರಸ: ಮನಮುಟ್ಟುವವುಗಳು. ಮನುಷ್ಯ ಯಾಕೆ ಹೀಗೆ?ಮನದಲ್ಲಿ ಚಿಗುರಿ ನಿಲ್ಲದೆ ಓಡುವ ಬಯಕೆಗಳ ಹಿಂಬಾಲಿಸಿ ಕೊನೆಗೆ ಬದುಕನ್ನು ಗೋಳಿನ ತಾಣವನ್ನಾಗಿಸಿ ಬದುಕೆಲ್ಲ ನೆಮ್ಮದಿಯ ಅರಸುವ ಮೂರ್ಖನಾಗುತ್ತಾನೆ.
ಈ ಜಗತ್ತಿನಲ್ಲಿ ಸರ್ವ ಸುಖವನ್ನು ಅನುಭವಿಸಿ ಸಾಯುವಷ್ಟು ಆಯಸ್ಸು ಯಾರಿಗಿದೆ.? ಮನುಷ್ಯನ ಸೃಷ್ಟಿಯೇ ವಿಭಿನ್ನ.ಈ ಜಗದಲ್ಲಿ ಪ್ರತಿಯೊಬ್ಬನ ಬದುಕಿಗೂ ಒಂದು ಉದ್ದೇಶ ಇದೆ ನಿಜ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮಗಳನ್ನು ಪೂರ್ತಿ ಮಾಡಲು ಭೂಮಿ ಮೇಲೆ ಜನ್ಮ ತಾಳುತ್ತಾನೆ ಅನ್ನುವ ನಂಬಿಕೆಯಿದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬನ ಪಾತ್ರವೂ ವಿಭಿನ್ನ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ಬಹಳಷ್ಟು ಜನ ಬೇರೆಯವರನ್ನು ಅನುಕರಿಸಲು ಹೋಗಿ ತಮ್ಮ ಬದುಕಿನ ವಿಭಿನ್ನತೆಯನ್ನು ಕಳೆದುಕೊಂಡು ತಮ್ಮ ಬದುಕಿನ ಅಂದವನ್ನು ತಾವೇ ಕೆಡಿಸಿಕೊಳ್ಳುತ್ತಾರೆ.
ಮನುಷ್ಯನ ಬದುಕು ಈ ಜಗತ್ತಿನಲ್ಲಿ "ವೖವವಿಧ್ಯತೆಯಲ್ಲಿ ಏಕತೆ"ಗೆ ಉತ್ತಮ ಉದಾಹರಣೆ. ಅದೆಷ್ಟು ವಿಶೇಷ ವೖಶಿಷ್ಟ್ಯ ಬದುಕಿನ ಕಥೆಗಳು ಈ ಜಗತ್ತಿನಲ್ಲಿ ಇಂದಿಗೂ ಅದ್ಬುತ ಪ್ರದರ್ಶನಗಳನ್ನು ನೀಡುತ್ತಿದೆ. ಈ ಜಗತ್ತಿನಲ್ಲಿ ಬದುಕುವ ಪ್ರತಿ ಸಾಮಾನ್ಯ ಮನುಷ್ಯನ ಬದುಕಿನಲ್ಲೂ ವಿಭಿನ್ನ ವಿಶೇಷ ಅಸಮಾನ್ಯ ಕಥೆಗಳಿವೆ. ಹಾಗದರೆ ಇಲ್ಲಿ ಸೃಷ್ಟಿಯಲ್ಲಿ ಅಸಮಾನತೆ ಎಲ್ಲಿದೆ? ಈ ಅಸಮಾನತೆ ಮನುಷ್ಯ ಮನುಷ್ಯನ ನಡುವಿನ ಅಸಮಧಾನ ಹಾಗೂ ಸ್ವಾರ್ಥದಿಂದ ಸೃಷ್ಟಿಯಾದದ್ದು ಹೊರತು ಜಗತ್ತಿನ ಮೂಲ ಸೃಷ್ಟಿಯಿಂದಲ್ಲ. ಈ ಜಗದ ಪ್ರತಿ ಸೃಷ್ಟಿಯಲ್ಲಿ ವೖಶಿಷ್ಟ್ಯತೆ ಇದೆ ಹೊರತು, ಅಸಮಾನತೆ, ಅಸಮಾಧಾನವಿಲ್ಲ.
ಮನುಷ್ಯ ಇಂದಿಗೂ "ನಾನು" ಎಂಬುದನ್ನು ಸ್ವಾರ್ಥ, ಅಹಂಕಾರವನ್ನು ಅಲಂಕರಿಸಲು ಬಳಸಿಕೊಳ್ಳುತಿದ್ದಾನೆ ಹೊರತು ತನ್ನ ಅಸ್ತಿತ್ವವನ್ನು ಅಲಂಕರಿಸಲು ಬಳಸುತ್ತಿಲ್ಲ. ನಾನು ಎಂಬುದು ಕೇವಲ ಸ್ವಾರ್ಥ ಅಹಂಕಾರವಲ್ಲ. ಅದು ನಮ್ಮ ಬದುಕಿನ ಗುರುತು. ಮನುಷ್ಯ ತನ್ನನ್ನು ತಾನು ಗುರುತಿಸುವುದು ನಾನು ಎಂಬ ಸರ್ವನಾಮದಲ್ಲೆ. ಅವನ ಹೆಸರು ಪರರು ಗುರುತಿಸಲೆಂದು ಸೃಷ್ಟಿಯಾಗಿರುವುದು.ಹಾಗದರೆ ನಾನು ಎಂದರೆ ಅಹಂ ಮಾತ್ರ ಅಲ್ಲ. ಸ್ವಯಂ ಕೂಡ. ನಾನು ಎಂಬುದು ಮನುಷ್ಯನ ಸ್ವಂತಿಕೆಯನ್ನು ಸೂಚಿಸುವಂತಹ ಒಂದು ಪದವು ಹೌದು. ಆದರೆ ಇದನ್ನು ಬಿಟ್ಟು ಮನುಷ್ಯ ಅದನ್ನು ಅತಿಯಾಗಿ ಬಳಸುವುದು ಸ್ವಾರ್ಥ, ಅಹಂಕಾರದ ಸೂಚಕವಾಗಿ ಎಂಬುದೇ ವಿಷಾದನೀಯ ವಿಚಾರ.
ಮನುಷ್ಯನಿಗೆ ಕಣ್ಣುಗಳನ್ನು ನೀಡಿರುವುದು ಬೇರೆಯವರನ್ನು ನೋಡೋದಕ್ಕೆ. ಇಲ್ಲಿ ಯಾರು ಕೂಡ ತನ್ನ ಕಣ್ಣುಗಳಿಂದ ತನ್ನನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸರಿಯಾಗಿ ಮನುಷ್ಯ ಯಾವಾಗಲೂ ತನಗಿಂತ ಪರರ ಬದುಕಿನ ಬಗ್ಗೆ ಅತಿ ಹೆಚ್ಚು ಚಿಂತಿತನಾಗಿರುತ್ತಾನೆ.ಆದರೆ ವಿಚಿತ್ರ ಏನು ಗೊತ್ತ ಮನುಷ್ಯನಿಗೆ ಬದುಕು ನೀಡಿರುವುದು ಕೇವಲ ತನ್ನ ಕರ್ಮಗಳನ್ನು ಕಳೆಯಲು. ಬೇರೆಯವರ ಬದುಕಿನ ಬಗ್ಗೆ ಎಷ್ಟು ಚಿಂತೆ ಮಾಡಿದರೂ ನಮಗ್ಯಾವ ಫಲವೂ ಸಿಗದು. ಆದರೆ ಅನ್ಯರಿಗೆ ಮಾಡುವ ಕರ್ಮಗಳು ಮಾತ್ರ ನಮ್ಮ ಬದುಕ ಜೋಳಿಗೆಯನ್ನು ಪಾಪ ಪುಣ್ಯಗಳ ರೂಪದಲ್ಲಿ ತುಂಬುವುದು. ಆದ್ದರಿಂದ ಅನ್ಯರಲ್ಲಿ ಏನಿದೆ ಏನಿಲ್ಲ ಎಂಬುದರ ಚಿಂತೆ ನಮ್ಮ ಮನಸಿನಲ್ಲಿ ಮತ್ಸರವನ್ನು ಮೂಡಿಸಿ ಮನಸು ಹಾಳಮಾಡಬಹುದು ಹೊರತು ಬೇರೆನೂ ಮಾಡಲು ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಇನ್ನೂ ಕೆಲವು ವಿಚಿತ್ರ ಮನಸ್ಥಿತಿಗಳಿವೆ. ಅವರಿಗೆ ಅನ್ಯರ ಕೊರತೆಯನ್ನು ಕೆದಕಿ ಹುಡುಕಿ ತೆಗೆಯುವುದೆ ಕೆಲಸವಾಗಿರುತ್ತದೆ. ಯಾರಾದರೂ ಭೇಟಿಗೆ ಸಿಕ್ಕರೆ ಸಾಕು. ಅವರ ಭೇಟೆ ಸಿಕ್ಕಿದವರ ಕೊರತೆಯ ಕಡೆಗೆ ಭರ್ಜರಿಯಾಗಿ ಸಾಗುತಿರುತ್ತದೆ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಕೊರತೆಗಳು ಯಾಕಿದೆ ಎಂಬುದು ಸ್ವತಃ ಅವನಿಗೂ ಗೊತ್ತಿರದ ವಿಚಾರ.ಅದು ಅವರಿಗೆ ದೊಡ್ಡ ವಿಷಯವೇ ಆಗಿರಲಾರದು. ಆದರೆ ಈ ತರದ ಪೖಶಾಚಿಕ ಮನಸ್ಥಿತಿಗಳು ಕೆದಕಿ ಪ್ರಶ್ನಿಸಿದಾಗ ಅವರ ಮನಸ್ಥಿತಿ ಹದಗೆಡಲು ಶುರುವಾಗುತ್ತದೆ. ಯಾರನ್ನಾದರೂ ಯಾವುದೇ ವಿಚಾರವಾಗಿ ಪ್ರಶ್ನಿಸುವ ಮೊದಲು ಒಂದು ಕ್ಷಣ ಯಾಕೆ ಯೋಚಿಸಬಾರದು?ಅದು ನಮ್ಮ ಸಂಸ್ಕಾರವನ್ನು ಚಂದಗಾಣಿಸುತ್ತದೆ.ಯಾವುದೇ ವ್ಯಕ್ತಿಯ ಉತ್ತಮ ವಿಚಾರಗಳನ್ನು ಹುಡುಕಿ ಪ್ರೋತ್ಸಾಹಿಸುವುದು ಬಿಟ್ಟು ಇಲ್ಲದುದರ ಕೆದಕಿ ಬಗ್ಗೆ ಯಾಕೆ ಟೀಕಿಸಬೇಕು?
ಇನ್ನೂ ನಮ್ಮ ಬದುಕಿನ ವಿಚಾರಕ್ಕೆ ಬಂದರೆ, ಯಾವಾಗಲೂ ಇಲ್ಲ ಎಂಬುದರ ಬಗ್ಗೆ ಚಿಂತೆ ಹೆಚ್ಚು.ಪಡೆದುದರ ಬಗ್ಗೆ ತೃಪ್ತಿಯಿಲ್ಲ. ಇನ್ನೂ ಬೇಕೆಂಬ ಅತೀವ ಆಸೆ ಬದುಕನ್ನು ದುಃಖದ ಕೂಪಕ್ಕೆ ತಲ್ಲುತ್ತದೆ. ಇನ್ನೂ ಒಂದು ಕಡೆ ಅವರಿವರು ನಮ್ಮ ಕೊರತೆಗಳನ್ನು ಟೀಕಿಸುತ್ತಾರೆ ಎನ್ನುವ ಚಿಂತೆ.ನಾವು ಸರಿಯಿರುವಾಗ ಇತರರ ಬಗ್ಗೆ ಚಿಂತಿಸುವ ಅಗತ್ಯವೇನಿದೆ? ಅನ್ಯರ ಕೆಟ್ಟ ಯೋಚನೆಗಳಿಗೆ ನಮ್ಮ ಬದುಕನ್ನು ಕೆಡಿಸುವ ಶಕ್ತಿ ಬರುವುದು ನಾವು ಅವುಗಳಿಗೆ ಮಾನ್ಯತೆ ಕೊಟ್ಟಾಗ ಮಾತ್ರ.ಒಂದು ಶುದ್ಧ ಹೃದಯ, ಬದುಕಿನ ತುಂಬ ಸತ್ಕರ್ಮ ಇವೆರಡು ಇದ್ದರೆ ಭಗವಂತನಿಗೂ ಭಯಪಡುವ ಅಗತ್ಯವಿಲ್ಲ.ಹೃದಯ ಮತ್ತು ಕರ್ಮ ಭಗವಂತ ಎಲ್ಲರಿಗೂ ಸಮನಾಗಿ ಹಂಚಿರುತ್ತಾನೆ. ಅದನ್ನು ಶುದ್ದವಾಗಿಡುವುದು ಮಾತ್ರ ಅವರವರಿಗೆ ಬಿಟ್ಟಿದ್ದು.
ಅಂಗೖಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರಂತೆ ಅಂತ ಒಂದು ಗಾದೆ ಇದೆ. ನಮ್ಮೊಳಗೆ ನಮಗೆ ಬೇಕಾದುದೆಲ್ಲ ಇರುತ್ತವೆ. ಆದರೆ ನಾವದನ್ನ ಬೇರೆಯವರ ಬದುಕಿನಲ್ಲಿ ಹುಡುಕಿ ಕಾಲಹರಣ ಮಾಡುತ್ತೇವೆ.ಇನ್ನೊಬ್ಬರ ಬದುಕಿನಲ್ಲಿ ಇರುವುದೆಲ್ಲ ನಮ್ಮ ಬದುಕಿನಲ್ಲಿರಲು ಭಗವಂತ ಯಾರ ಬದುಕನ್ನು ನಕಲು ಮಾಡಿ ಕೊಟ್ಟಿಲ್ಲ. ಪ್ರತಿ ಮನುಷ್ಯನನ್ನು ವಿಭಿನ್ನವಾಗಿ ರೂಪಿಸಿದ್ದಾನೆ.ಇಲ್ಲಿ ಮನುಷ್ಯ ಮನುಷ್ಯನ ನಡುವೆ ಹೋಲಿಕೆ ವ್ಯಾತ್ಯಾಸಕ್ಕಿಂತ ಹೊಂದಾಣಿಕೆ ಮುಖ್ಯ. ಬದುಕಿನಲ್ಲಿ ನಮ್ಮ ಹಾಗೂ ಆನ್ಯರ ನಡುವೆ ಹೋಲಿಕೆ, ತುಲನೆಗಳು ಶುರುವಾದಾಗಲೇ ಇನ್ನೊಬ್ಬರ ಮೇಲೆ ದ್ವೇಷ ಅಸಮಾಧಾನ, ಅಸಹನೆಗಳು ಶುರುವಾಗುವುದು.ನೆಮ್ಮದಿ ಸುಖ ಶಾಂತಿ ನಮ್ಮೊಳಗೆ ಇರುವವುಗಳು.
ಅದೆಷ್ಟೋ ಸಲ ನಮ್ಮ ಬದುಕಿನೊಳಗಿನ ಆಂತರಿಕ ಸಂಘರ್ಷಗಳನ್ನೆ ಸಂಭಾಳಿಸುವುದು ಕಷ್ಟವೆನಿಸುವಾಗ ಇನ್ನೊಬ್ಬರ ಜೀವನದ ಉಸಾಬರಿ ನಮಗೇಕೆ ಬೇಕು? ಬದುಕು ಅವರವರ ಕರ್ಮನುಸಾರ ರೂಪಿತಗೊಂಡಿರುತ್ತದೆ. ಇಲ್ಲಿ ನಮ್ಮ ಕರ್ಮಗಳು ಮಾತ್ರ ನಮ್ಮ ಪಾಲು. ಪಾಲಿಗೆ ಬಂದದ್ದು ಪಂಚಮೃತವೆಂದು ಇರುವಷ್ಟು ದಿನ ಇದ್ದುದ್ದರಲ್ಲೆ ತೃಪ್ತಿಯಾಗಿ ಬದುಕುವುದು ಜಾಣತನ.



Comments
Post a Comment