ಈ ಜಗದಲಿ ನಾನ್ಯಾರು?

ಬದುಕ ನಿಶೆಯೊಳಗಿನಿಂದ

ಮೊದಲ ಪುಟ



ಈ ಜಗದಲಿ ನಾನ್ಯಾರು???


ಸುಳ್ಳು ಹೇಳಿ ಸವಿಯಾಗಿರಲೇ? ಸತ್ಯ  ಹೇಳಿ ಕಹಿಯಾಗಲೇ?ಇತರರ ಮಾತಿಗಂಜಿ ಮುದುರಿ ಮೂಲೆ ಸೇರಲೇ?ನನ್ನತನವನ್ನು ಮರೆಸಿ ಮುಖವಾಡ ಹೂದ್ದು ಜಗವ ಮೆಚ್ಚಿಸಲು ಪ್ರಯತ್ನಿಸಲೆ? ಅಥವ ಮನಸಾಕ್ಷಿ ಒಪ್ಪದನ್ನು ದಿಕ್ಕರಿಸಿ  ಕೇವಲ ನನ್ನ  ಆತ್ಮೀಯ ಅತ್ಮವನು ನಂಬಲೇ?ಈ ತರಹದ ಗೊಂದಲಗಳು ಎಲ್ಲರ ಬದುಕಿನಲಿ ಸರ್ವೆ ಸಾಮಾನ್ಯ.ಯಾಕೆಂದರೆ ನಾವು ಬದುಕುತಿರುವುದು ಹತ್ತು ಹಲವು ಮನಸ್ಥಿತಿಗಳಿರುವ ಒಂದು ಸಮಾಜದ ಜೊತೆಯಲ್ಲಿ.
ಇಲ್ಲಿ ಏನೇ ಕೆಲಸ ಮಾಡಿದರು ಹೂಗಳಿಕೆ ತೆಗಳಿಕೆ ಎರಡನ್ನೂ ಸರಿ ಹೊಂದಿಸಿ ಬಾಳುವುದನ್ನು ಕಲಿಯಬೇಕು..ಹಲವಾರು ಮನಸ್ಥಿತಿಗಳ ಜೊತೆ ನಮ್ಮ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವಷ್ಟರಲ್ಲಿ ಬಾಳು ಗೋಳಾಗುತ್ತದೆ. ಹೊಗಳಿಕೆ ಎಲ್ಲರ ನೆಚ್ಚಿನ ಸಂಗಾತಿ.ಆದರೆ ತೆಗಳಿಕೆ ಕಂಡರೆ  ಮಾತ್ರ ಬಹುದೂರ ಓಡುವರು.ಆದರೆ ಇಲ್ಲಿ ಯಾವುದು ನಿಜವಾಗಿರುತ್ತದೆಯೋ ಅದನ್ನು ಸ್ವೀಕರಿಸುವ ಮನೋಭಾವ ಬಹಳ ಮುಖ್ಯ.ಸಿಹಿ ಕಹಿ ಎರಡೂ ಬದುಕಿಗೆ ಬಹಳ ಮುಖ್ಯ.


ಅನ್ಯರ ಮೆಚ್ಚಿಸಿ ಬದುಕಲಾದಿತೇ ಈ ಜಗದಲ್ಲಿ?ಎಲ್ಲರು ಮೆಚ್ಚುವ ವಸ್ತು ಜಗದಲ್ಲಿ ಬಹಳ ವಿರಳ.ಆದ್ದರಿಂದ  ಈ ಜಗದಲ್ಲಿ ಇತರರು ಮೆಚ್ಚಬೇಕೆಂಬ ಮನಸ್ಥಿತಿಯಿಂದ ಕೆಲಸ ಮಾಡಿ ಗೆಲ್ಲಲು ಸಾಧ್ಯವಿಲ್ಲ. ನಾವು ಮಾಡುವ ಕೆಲಸಗಳು ನಮಗೆ ಮನತೃಪ್ತಿ ನಿಡಿದರೆ ಸಾಕು.ನಿಜವೇನಂದರೆ ಈ ಜಗದಲ್ಲಿ ನಮಗಾತ್ಮೀಯವಾದದು ನಮ್ಮಆತ್ಮವೊಂದೆ.ಅದರ ಮೇಲೆ ವಿಶ್ವಾಸವಿಟ್ಟರೆ ಅದೇ ಆತ್ಮವಿಶ್ವಾಸ. ಇತರರ ಮೆಚ್ಚಿಸಲು ಆತ್ಮಕ್ಕೆ ದ್ರೋಹ ಬಗೆದರೆ ಅದು ಆತ್ಮದ್ರೋಹ.ಆತ್ಮವಿಶ್ವಾಸದಿಂದ  ಆತ್ಮದ್ರೋಹ ಮಾಡದೆ ನಮಗೆ ಬೇಕಾದ ಹಾಗೆ ಇತರರಿಗೆ ತೊಂದರೆಯಾಗದಂತೆ ಬದುಕುವುದು ನಿಜವಾದ ಜೀವನವಲ್ಲವೇ? ನಮ್ಮ  ಕೆಲಸ ಮುಗಿದ ಮೇಲೆ ಫಲಿತಾಂಶಕ್ಕೆ ಮನಸಾಕ್ಷಿಯ ಮೊರೆ ಹೋದರೆ ಸಾಕು.ಇನ್ನುಳಿದವು  ಭಗವಂತ ಶ್ರೀಕೃಷ್ಣ ನ ಮಾತಿನಂತೆ ಕರ್ಮಣ್ಯೇ ವಧಿಕಾರಸ್ತೇ ಮಾ ಫಲೇಷು ಕದಾಚನ"


ಪ್ರತಿಯೊಂದು ವಿಚಾರಕ್ಕೂ ಜಗದಲ್ಲಿ  ಪರ ವಿರೋಧ  ಎರಡೂ ಇದೆ. ಎರಡೂ ಕೂಡ ವಿಚಾರವನ್ನು ಅವರು ನೋಡುವ ದೃಷ್ಟಿಕೋನದ ಮೇಲೆ ಅವಲಂಭಿತವಾಗಿರುತ್ತದೆ. ವಿಚಾರಗಳು ವಿಮರ್ಶೆಗೆ ಒಳಪಟ್ಟಾಗಲೆ ಅದರ ಮೌಲ್ಯ  ಹೆಚ್ಚವುದು.ಪರ ಹಾಗೂ ವಿರೋಧದ ನಡುವೆ ಯಾವುದು ಸದೃಢ ಹಾಗೂ ಸತ್ಯವಾಗಿದೆಯೊ ಅದೇ ಗೆಲುವು ಕಾಣುವುದು.ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ.ಸರಿಯಾಗಿದ್ದರೆ ಮುನ್ನಡೆಯೋಣ.ಇಲ್ಲಿ ಅನ್ಯರು ಮೆಚ್ಚಲಿಲ್ಲ ಎಂಬ ವಿಚಾರಕ್ಕೆ ಚಿಂತಿಸಿ ಚಿತೆಗೆ ಹಾರುವುದು ಮೂರ್ಖತನ. ಇಲ್ಲಿ ನಮ್ಮ ವಿಚಾರಗಳು ಅನ್ಯರನ್ನು ಮೆಚ್ಚುಸುವಂತಿಲ್ಲವಾದರೂ ಪರವಾಗಿಲ್ಲ.ಆದರೆ, ಇತರರ ಬದುಕನ್ನು ಚುಚ್ಚುವಂತೆ ಇರಬಾರದು. ಇದು ಮಾತ್ರ ಇಲ್ಲಿ ಬಹಳ ಮುಖ್ಯ.


ನಮ್ಮ ಬದುಕಿನಲ್ಲಿ ಬರುವವರೆಲ್ಲರೂ ಕೂಡ ಕೇವಲ ಪಕ್ಕದಲ್ಲಿ ಚಲಿಸುವ ಸಮಾನಾಂತರ  ರೇಖೆಗಳಷ್ಟೆ.ಜೊತೆಯಾಗಿ ಸಾಗಬಲ್ಲೆವು,ಆದರೆ ಯಾರು ನಮ್ಮ  ಬದುಕಿನ ಪಾತ್ರ  ಹಾಗೂ ಜವಾಬ್ದಾರಿಯನ್ನು ನಿರ್ವಾಹಿಸಲಾರರು.ಈ ಜಗದಲ್ಲಿ ಪ್ರತಿಯೊಬ್ಬನ ಪಾತ್ರಕ್ಕೂ ಅದರದೇ ಆದ ಮಹತ್ವ  ಇದೆ.ಆ ಮೌಲ್ಯವನ್ನು ಮೊದಲು ನಾವು ತಿಳಿಯಬೇಕು.ಹೌದು. ಮೊದಲು ನಮ್ಮನು ನಾವು ಗೌರವಿಸಬೇಕು.ಅದೇ ಆತ್ಮಗೌರವ.ನಮ್ಮ  ಬದುಕು ನಮ್ಮ ಹೆಮ್ಮೆ.ನಮ್ಮ ಜೀವನ ಪಾತ್ರವನ್ನು ನಾವು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬದುಕುವುದು ನಮ್ಮ ಜಾಣತನ.ಅವರಿವರ ಚಿಂತೆ ಬಿಟ್ಟು ಮೊದಲು ನಮ್ಮ ಬಗ್ಗೆ ನಾವು ತಿಳಿದುಕೊಳ್ಳೋಣ.ಇಲ್ಲವಾದಲ್ಲಿ ನಮ್ಮ ಬಗ್ಗೆ ಅನ್ಯರು ಹೇಳಿದನ್ನೆ ನಂಬಿ ಅದನ್ನೇ ಬದುಕಾಗಿಸಿ ಕೊನೆಗೆ ಕೊರಗಿ ಕರಗಬೇಕಾಗುತ್ತದೆ.


ಈ ಜಗದಲ್ಲಿ ಹಲವರು ಇತರರು ಕೂಡ ಅವರ ಮೂಗಿನ ನೇರಕ್ಕೆ ಬದುಕಬೇಕೆಂಬ ನಿಲುವನ್ನು ಹೊಂದಿರುತ್ತಾರೆ.ಆದರೆ ಅವರು ಮಾತ್ರ  ಅವರಿಚ್ಛೆಯಂತೆ ಬದುಕುತಿರುತ್ತಾರೆ.ಯಾವಾಗ ನಾವು ಅವರ ಮಾತಿಗೆ ವಿರುದ್ಧವಾಗಿ  ಬದುಕಲು ಶುರುಮಾಡುತ್ತೇವೆಯೋ ಆ ಕ್ಷಣದಿಂದ ನಾವು ಕೆಟ್ಟವರಾಗಲು ಶುರುವಾಗುತ್ತೇವೆ.ಬದುಕು ನಮ್ಮದು.ಇದರ ಲಾಭ ನಷ್ಟಕ್ಕೆ ನಾವೇ ಹೂಣೆ. ಆದರೆ ಕೆಲವರ ಬದುಕು  ನಮ್ಮ ಮೇಲೆ ಅವಲಂಭಿತವಾಗಿದ್ದು ಅವರು ಅದರಲ್ಲಿ ಒಂದು  ಆರಾಮವಲಯವನ್ನು ಸೃಷ್ಟಿಸಿಕೊಂಡಿರುತ್ತಾರೆ.ಆ ಆರಾಮವಲಯಕ್ಕೆ ಕುತ್ತು ಬಂದಾಗ  ಅವರು ಸಿಡಿದೇಳುವುದು ಸರ್ವೆಸಾಮಾನ್ಯ.ಈ ಜಗದಲ್ಲಿ ಎಲ್ಲರೂ ಅವರದೆ ಆದ ಇಷ್ಟ ಕಷ್ಟಗಳನ್ನು  ಹೊಂದಿರುತ್ತಾರೆ.ಬೇರೆಯವರ ಇಷ್ಟ ಕಷ್ಟಗಳನ್ನು  ನಾವು ಒಪ್ಪಬೇಕೆಂಬ ನಿಯಮಗಳೇನು ಇಲ್ಲ.ಹಾಗೆಯೇ ನಮ್ಮ ಇಷ್ಟ ಕಷ್ಟಗಳನ್ನು ಬೇರೆಯವರು ಒಪ್ಪಬೇಕೆಂಬ ನಿಯಮಗಳಿಲ್ಲ.ಎಲ್ಲರ ಬದುಕು ಅವರವರ ಆಯ್ಕೆ.ಇಲ್ಲಿ  ಪರಸ್ಪರ ಗೌರವ ಮುಖ್ಯ .
ಸಮಾಜದಲ್ಲಿ ನಾವು ಬದುಕುವಾಗ ಸಾಮಾಜಿಕ  ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ  ಕೆಲವೊಂದು ಕಾನೂನು ಹಾಗೂ ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ.ಅವುಗಳು ಸರಿಯಾಗಿದಲ್ಲಿ ಅದೆಷ್ಟೇ ಕಷ್ಟವಾಗಿದ್ದರೂ ಅವುಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ.ಆದರೆ ಆ ಕಟ್ಟು ಪಾಡುಗಳು ಕೇವಲ ಕೆಲವರ ಭ್ರಮೆಯ ದೃಷ್ಟಿಕೋನವಾದಲ್ಲಿ ಅದನ್ನ ತಿರಸ್ಕಾರ ಮಾಡಲು ಹಿಂಜರಿಯಬಾರದು. ಅದಕ್ಕಾಗಿ ನಮ್ಮ ಬದುಕನ್ನು ಅನ್ಯರ ಕೈಗೂಪ್ಪಿಸಿ ಹರಕೆಯ ಕುರಿಯಾಗೋ ಅನಿವಾರ್ಯತೆ ಇಲ್ಲ.ನಮಗೆ ಬದುಕಲು ಅನ್ಯರ ಸಲಹೆಗಳು ಬೇಕು.ಆದರೆ ನಿರ್ಧಾರ  ಮಾತ್ರ  ನಮ್ಮದಾಗಿರಬೇಕು.ಅದಕ್ಕಾಗಿನೇ ಭಗವಂತ  ಎಲ್ಲರಿಗೂ ಬುದ್ದಿಯನ್ನು ಕೊಟ್ಟಿರುವುದು. ಇಲ್ಲಿ ಬುದ್ಧಿ ಇದೆಯೋ ಇಲ್ಲವೋ ಎನ್ನುವುದು ವಿಚಾರವಲ್ಲ.ಬುದ್ದಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ನಮ್ಮದೆ.ಫಲಿತಾಂಶ ಬದುಕು ನಮ್ಮ ಹೆಮ್ಮೆ.ನಾವು ನಾವಾಗಿರೋಣ.ನಮ್ಮ ಬದುಕಿನ ಪಾತ್ರಕ್ಕೆ ನ್ಯಾಯ ಒದಗಿಸುವುದಷ್ಟೆ ನಮ್ಮ ಕರ್ತವ್ಯ .ಯಾಕೆಂದರೆ  ಯಾರ ಮೆಚ್ಚಿಸಿ ಬದುಕ ಹೋದರೂ ಕೊನೆಗೆ ಮೆಚ್ಚಬೇಕಾಗಿರುವವನು ಭಗವಂತನೊಬ್ಬನೆ.


***********************************************************************************PNRai...





Comments

Post a Comment